ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸೋಮವಾರ (ಮಾ.18) ಪ್ರಧಾನಿ ನರೇಂದ್ರ ಮೋದಿಯ ಸಮಾವೇಶ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತೆ ಪುನರುಚ್ಚರಿಸಿದ್ದಾರೆ.
ಶಿವಮೊಗ್ಗದ ಬೀಳಗಿಯ ರಾಚಟೇಶ್ವರ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಮಾತನಾಡಿ, “ನನ್ನ ಹೋರಾಟ ಕುಟುಂಬ ರಾಜಕಾರಣ ವಿರುದ್ಧ. ಸಿ ಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್, ನಳೀನ ಕುಮಾರ ಕಟೀಲು ಅವರಿಗೆ ಟಿಕೆಟ್ ನೀಡಿಲ್ಲ. ಪ್ರಧಾನಿ ಮೋದಿಯವರು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ವಿರೋಧ ಮಾಡಿದರು. ಆದರೆ ಕರ್ನಾಟಕದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರನಿಗೆ ಟಿಕೆಟ್ ನೀಡಿದ್ದಾರೆ” ಎಂದು ಕಿಡಿಕಾರಿದರು.
“ಕುಟುಂಬ ರಾಜಕಾರಣ ವಿರೋಧಿಸಿ, ಪಕ್ಷೇತರ ಸ್ಪರ್ಧೆ ಮಾಡುತ್ತಿದ್ದೇನೆ. ಗೆದ್ದು ನರೇಂದ್ರ ಮೋದಿಯವರ ಕೈ ಬಲಪಡಿಸುತ್ತೇನೆ. ಕೇಂದ್ರದ ನಾಯಕರು ದೂರವಾಣಿ ಸಂಪರ್ಕ ಮಾಡಿದರೂ, ಸ್ಪಷ್ಟ ನಿರ್ಧಾರ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ” ಎಂದರು.
“ಸಂಘ ಪರಿವಾರದ ಪ್ರಮುಖ ಗೋಪಾಲ್ ಅಯೋದ್ಯೆಯಿಂದ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದಾರೆ. ಅವರಿಗೂ ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ನಾನು ಹಿಂದೆ ಸರಿಯಲ್ಲ ಎಂದಿದ್ದೇನೆ” ಎಂದು ಹೇಳಿದರು.
ದೆಹಲಿಯವರು ಮನವೊಲಿಸುವುದಾದರೆ ಒಲಿಸಲಿ, ನಾನು ಮಾತನಾಡುವುದಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಮಧ್ಯೆ ಜನರೇ ತೀರ್ಮಾನ ಮಾಡುತ್ತಾರೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.