ಸಿಎಂ ಸ್ಥಾನಕ್ಕೆ ನಾನು ಕೂಡ ಬೇಡಿಕೆ ಇಡುವ ಆಸೆ ಹೊಂದಿದ್ದೇನೆ. ಆದರೆ, ಅದು ಈಗಲ್ಲ 2028ಕ್ಕೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಅಂತ ಹೇಳಿದ್ದಾರೆ. ಈಗ ರಾಜ್ಯದಲ್ಲಿ ಈಗ ಸಿಎಂ ಹುದ್ದೆ ಖಾಲಿ ಇಲ್ಲ” ಎಂದು ಹೇಳಿದರು.
“ಮುಖ್ಯಮಂತ್ರಿ ಬದಲಾವಣೆ ಬೇರೆಯವರು ಹೇಳುವ ಅಗತ್ಯವಿಲ್ಲ. ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆ ಪರಿಸ್ಥಿತಿ ಉದ್ಭವಿಸಿಲ್ಲ. ಪಕ್ಷದ ತೀರ್ಮಾನವೇ ನನ್ನ ತೀರ್ಮಾನ. ಮುಖ್ಯಮಂತ್ರಿ ಹುದ್ದೆ ಬೇರೆಯವರು ಕೇಳೋದು ಅವರವರ ಇಷ್ಟ” ಎಂದರು.
ಸಿಎಂ ಉಪಹಾರ ಕೂಟಕ್ಕೆ ಗೈರು ವಿಚಾರವಾಗಿ ಮಾತನಾಡಿದ ಅವರು, “ಅನಾರೋಗ್ಯದ ಕಾರಣ ಸಭೆಗೆ ಹೋಗಲು ಆಗಲಿಲ್ಲ. ಸಭೆಗೆ ಗೈರಾಗುವ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೂ ತಂದಿದ್ದೆ. ಮೀಟಿಂಗ್ಗೆ ಹೋಗದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ” ಎಂದರು.
ಪ್ರಧಾನಿ ನರೇಂದ್ರ ಮೋದಿ ಭಾಷಣ ವಿಚಾರವಾಗಿ ಪ್ರತಿಕ್ರಿಯಿಸಿ, “ಭಾರತೀಯ ಜನತಾ ಪಕ್ಷದಲ್ಲಿ ವಾಕ್ ಸ್ವಾತಂತ್ರ್ಯವಿಲ್ಲ. ಒಂದು ರಾಜ್ಯದಲ್ಲಿ ಇನ್ನೊಂದು ರಾಜ್ಯದ ಬಗ್ಗೆ ಟೀಕಿಸುವುದು ಸಹಜ. ಪ್ರಧಾನಿ ಮೋದಿ ಆರೋಪ ಮಾಡಿದ್ದನ್ನು ಒಪ್ಪಬೇಕು ಅಂತಿಲ್ಲ. ನಾವು ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದೆವು. ನಾವು ಬಿಜೆಪಿ ವಿರುದ್ಧ ಆರೋಪ ಮಾಡಿದಾಗ ಅವರು ಒಪ್ಪಿಕೊಂಡಿದ್ದರಾ? ಮೋದಿ ಒಬ್ಬ ಭಾಷಣಕಾರ ಅಷ್ಟೇ” ಎಂದು ಹೇಳಿದರು.