Homeಕರ್ನಾಟಕಇನ್ವೆಸ್ಟ್ ಕರ್ನಾಟಕ-2025ರ ಸಮನ್ವಯ ಸಭೆ ನಡೆಸಿದ ಸಚಿವ ಎಂ ಬಿ ಪಾಟೀಲ

ಇನ್ವೆಸ್ಟ್ ಕರ್ನಾಟಕ-2025ರ ಸಮನ್ವಯ ಸಭೆ ನಡೆಸಿದ ಸಚಿವ ಎಂ ಬಿ ಪಾಟೀಲ

ಫೆಬ್ರವರಿ 11ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕವು ಹೂಡಿಕೆಗೆ ಅತ್ಯುತ್ತಮ ತಾಣವೆನ್ನುವುದನ್ನು ಮನದಟ್ಟು ಮಾಡಿಕೊಡುವ ರೀತಿಯಲ್ಲಿ ಅತ್ಯುತ್ತಮವಾಗಿ ಬಿಂಬಿಸಲು ತೀರ್ಮಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಬುಧವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ `ಇನ್ವೆಸ್ಟ್ ಕರ್ನಾಟಕ-2025’ರ ಮೊಟ್ಟಮೊದಲ ಜಾಗತಿಕ ಹೂಡಿಕೆದರರ ಸಮಾವೇಶದ ಸಮನ್ವಯ ಸಭೆಯಲ್ಲಿ ನಾನಾ ಇಲಾಖೆಯ ಉನ್ನತಾಧಿಕಾರಿಗಳು, ಕೈಗಾರಿಕಾ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಜೊತೆ ಅವರು ವಿಚಾರ ವಿನಿಮಯ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಸಚಿವರು, “ಜಾಗತಿಕ ಹೂಡಿಕೆದಾರರ ಸಮಾವೇಶವು ಬಂಡವಾಳ ಹೂಡಿಕೆ, ಕೈಗಾರಿಕಾ ಮತ್ತು ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಹೀಗೆ ಹಲವು ದೃಷ್ಟಿಗಳಿಂದ ಮಹತ್ತ್ವದ್ದಾಗಿದೆ. ಈ ಸಮಾವೇಶದಲ್ಲಿ ದೇಶ-ವಿದೇಶಗಳ 5 ಸಾವಿರ ಪ್ರತಿನಿಧಿಗಳು ಮತ್ತು ತಾಂತ್ರಿಕ ಪರಿಣತರು ಭಾಗವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆ ನೀಡುತ್ತಿದ್ದು, ಮಹಿಳಾ ಉದ್ಯಮಿಗಳಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುತ್ತಿದೆ” ಎಂದರು.

“2025ರ ಫೆ.11ರ ಸಂಜೆಯೇ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಫೆ.12 ಮತ್ತು 13ರಂದು ಸಂಪೂರ್ಣವಾಗಿ ಎರಡು ದಿನ ಗಂಭೀರ ಚರ್ಚೆಗಳು ನಡೆಯಲಿವೆ. ಫೆ.14ರಂದು ಸಮಾವೇಶದ ಸಮಾರೋಪ ನಿಗದಿಯಾಗಿದೆ. ಸಮಾವೇಶವನ್ನು ಯಶಸ್ವಿಗೊಳಿಸಲೆಂದು ಈಗಾಗಲೇ ಅಮೆರಿಕ ಮತ್ತು ಜಪಾನಿನಲ್ಲಿ ರೋಡ್ ಶೋ ನಡೆಸಲಾಗಿದೆ. ಸದ್ಯದಲ್ಲೇ ಯೂರೋಪಿನಲ್ಲೂ ರೋಡ್-ಶೋ ನಡೆಯಲಿದೆ. ಗಣ್ಯ ಸಾಧಕರೊಬ್ಬರನ್ನು ಸಮಾವೇಶದ ಉದ್ಘಾಟಕರನ್ನಾಗಿ ಆಹ್ವಾನಿಸಲಾಗುವುದು” ಎಂದು ತಿಳಿಸಿದರು.

“ಆಮಂತ್ರಿತ ಉದ್ಯಮಿಗಳು ಬಯಸಿದರೆ ರಾಜ್ಯದ ಪ್ರವಾಸಿ ತಾಣಗಳಿಗೆ ಅವರನ್ನು ಕರೆದೊಯ್ಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಲಾಗಿದೆ. ಆಹ್ವಾನಿತರಿಗೆ ಸುಗಮ ಸಂಚಾರ, ವಸತಿ ಮತ್ತು ಆತಿಥ್ಯ, ಕಾನೂನು ಮತ್ತು ಸುವ್ಯವಸ್ಥೆ ಯಾವುದರಲ್ಲೂ ಕಿಂಚಿತ್ತೂ ಲೋಪವಾಗದಂತೆ ಆಯಾಯ ಇಲಾಖೆಗಳು ನೋಡಿಕೊಳ್ಳಬೇಕು. ಈ ಸಮಾವೇಶದ ಮೂಲಕ ರಾಜ್ಯದ ವರ್ಚಸ್ಸು ಹೆಚ್ಚಾಗುವಂತೆ ಆಗಬೇಕು” ಎಂದರು.

ಸಭೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ ಉಪಸ್ಥಿತರಿದ್ದರು. ಜೊತೆಗೆ ಕೃಷಿ, ಗಣಿ ಮತ್ತು ಜವಳಿ, ಪ್ರವಾಸೋದ್ಯಮ, ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು, ಬಿಡಿಎ, ಬಿಎಂಟಿಸಿ, ಕೆಎಸ್ಐಐಡಿಸಿ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಗೂ ಎಫ್ಕೆಸಿಸಿಐ, ಅಸೋಚಂ, ಕಾಸಿಯಾ, ಬಿಸಿಐಸಿ, ಅವೇಕ್, ಡಿಐಸಿಸಿಐ, ಕರ್ನಾಟಕ ದಲಿತ ಉದ್ಯಮಿಗಳ ಒಕ್ಕೂಟ, ಲಘು ಉದ್ಯೋಗ ಭಾರತಿ, ಏವಿಯಾನ್ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments