ದಕ್ಷಿಣ ಕನ್ನಡ ಜಿಲ್ಲೆಯ ನೆರೆ ಹಾವಳಿ ಪ್ರದೇಶಗಳಿಗೆ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಭಾರೀ ಮಳೆಯಿಂದಾಗಿ ಮಂಗಳೂರಿನ ಮುಳುಗಡೆ ಸ್ಥಳಗಳಿಗೆ ಭೇಟಿ ನೀಡಿದರು. ನಂತರ ಅದ್ಯಪಾಡಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.
ಸಚಿವರ ಜೊತೆ ಚರ್ಚೆ ನಡೆಸಿದ ಅದ್ಯಪಾಡಿ ಸ್ಥಳೀಯ ನಿವಾಸಿಗರು, ಪ್ರತಿ ವರ್ಷ ಅದ್ಯಪಾಡಿಯಲ್ಲಿ ಪಾಲ್ಗುಣಿ ನದಿಯ ನೆರೆ ಪ್ರವಾಹದ ಬಗ್ಗೆ ಮಾಹಿತಿ ನೀಡಿದರು.
ತೋಟ ಗದ್ದೆಗಳು ಮುಳುಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು. ಹಾಗೆಯೇ ಅದ್ಯಪಾಡಿಯ ಅಕ್ಕ ಪಕ್ಕದ ಹಳ್ಳಿಗಳಿಗೆ ಪಲ್ಗುಣಿ ನದಿ ನೆರೆ ಹಾವಳಿ ತಡೆಯಲು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರಿಂದ ವರಿದಿ ಪಡೆದು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ನೆರೆ ಪರಿಹಾರ ನಿರಾಕರಿಸಿದ ರೈತರು
ನೆರೆ ಪರಿಹಾರ ತೆಗೆದುಕೊಳ್ಳುವಂತೆ ನಿವಾಸಿಗರಿಗೆ ಮನವಿ ಮಾಡಿದ ದಿನೇಶ್ ಗುಂಡೂರಾವ್, “ನೆರೆ ಪರಿಹಾರಕ್ಕೂ ಶಾಶ್ವತ ಪರಿಹಾರಕ್ಕೂ ಸಂಬಂಧವಿಲ್ಲ. ನೆರೆ ಪರಿಹಾರ ಪಡೆದರೆ ಶಾಶ್ವತ ಪರಿಹಾರ ಆಗಲ್ಲ ಎಂಬ ಭಾವನೆ ಬೇಡ. ಒಂದಕ್ಕೂಂದು ಲಿಂಕ್ ಮಾಡುವ ಅಗತ್ಯವಿಲ್ಲ” ಎಂದರು.
“ಭತ್ತದ ಗದ್ದೆ ತೋಟ ಮುಳುಗಡೆಯಿಂದ ನಷ್ಟ ಅನುಭವಿಸಿದ್ದೀರಾ. ಅದಕ್ಕೆ ಸರ್ಕಾರದಿಂದ ಸಿಗುವ ನೆರೆ ಪರಿಹರವನ್ನ ಪಡೆಯಿರಿ. ಪಲ್ಗಣಿ ನದಿಯಿಂದಾಗುವ ನೆರೆ ಹಾವಳಿ ತಡೆಯುವ ಶಾಶ್ವತ ಪರಿಹಾರ ಒದಸುವ ಜವಾಬ್ದಾರಿ ನಮಗೆ ಬಿಡಿ” ಎಂದು ರೈತರನ್ನು ಮನವೊಲಿಸಿದರು.
ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಕಳೆದ 11 ವರ್ಷದಿಂದ ನೆರೆ ಪರಿಹಾರವನ್ನ ತಿರಸ್ಕರಿಸುತ್ತಾ ಬಂದಿದ್ದ ಅದ್ಯಪಾಡಿ ನಿವಾಸಿಗರು. ಸಚಿವರ ಮನವಿಗೆ ಒಪ್ಪಿಗೆ ಸೂಚಿಸಿ ಪರಿಹಾರ ಪಡೆಯುವುದಾಗಿ ಸ್ಥಳೀಯ ಹೇಳಿದರು.