ರೈತರು ನೀಡುವ ಕಬ್ಬಿನ ಮೇಲೆ ಸಕ್ಕರೆ ಕಾರ್ಖಾನೆಗಳು ನಡೆಯುತ್ತಿದ್ದು, ರೈತರಿಗೆ ಕಷ್ಟಗಳಿಗೆ ಸ್ಪಂದಿಸಿ 14 ದಿನದೊಳಗಾಗಿ ಕಬ್ಬು ಸರಬರಾಜು ಮಾಡುವ ಹಣ ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಎಚ್ಚರಿಕೆ ನೀಡಿದರು.
ಅವರು ಇಂದು ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರ ಸಭೆ ನಡೆಸಿ ಮಾತನಾಡಿದರು. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಅವರು 29 ಕೋಟಿ ರೂ ಹಣ ರೈತರಿಗೆ ಪಾವತಿಸುವುದು ಬಾಕಿ ಇದೆ. ಪ್ರತಿ ವಾರ 4 ರಿಂದ 5 ಕೋಟಿ ರೂ ಹಣ ಪಾವತಿಸಿ. ಮಾಚ್೯ 15 ರ ನಂತರ ಬಾಕಿ ಇದ್ದರೆ ಬಡ್ಡಿ ಸಮೇತ ವಸೂಲಿ ಮಾಡಿ ರೈತರಿಗೆ ನೀಡಲಾಗುವುದು. ಕೊಪ್ಪ ಸಕ್ಕರೆ ಕಾರ್ಖಾನೆ ಅವರು ಬಾಕಿ ಇರುವ 7 ಕೋಟಿ ರೂ ಹಣವನ್ನು ಫೆಬ್ರವರಿ ಅಂತ್ಯದೊಳಗೆ ಪಾವತಿಸುವಂತೆ ಸೂಚನೆ ನೀಡಿದರು.
ಕಬ್ಬು ಕಟಾವಿಗೆ ಸಂಬಂಧಿಸಿದಂತೆ ಒಂದೊಂದು ರೀತಿಯಲ್ಲಿ ದರವನ್ನು ರೈತರಿಂದ ವಸೂಲಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಭೆ ನಡೆಸಿ ಏಕರೂಪ ದರ ನಿಗದಿಪಡಿಸಲಾಗುವುದು. ರೈತರ ಜೀವನಾಡಿಯಾಗಿರುವ ಸಕ್ಕರೆ ಕಾರ್ಖಾನೆಯನ್ನು ಉಳಿಸಿ ಬೆಳಸಲು ಶ್ರಮಿಸುತ್ತಿದ್ದು, ರೈತರು ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕೆಣ ಮಾಡಲಾಗುವುದೇ ಎಂದು ನನ್ನನ್ನು ಪ್ರಶ್ನಿಸಿದರೆ ನೋವಾಗುತ್ತದೆ ಎಂದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಮಾತನಾಡಿ, ಸರ್ಕಾರಿ ಸೌಮ್ಯದಲ್ಲಿರುವ ಕಂಪನಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ನಡೆಸಲಾಗುತ್ತದೆ. ಪ್ರತಿ ವರ್ಷ ಲಾಭ ನಷ್ಟ ಕುರಿತು ಆಡಿಟ್ ಮಾಡಲಾಗುವುದು. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಶಾಸಕರು ಮುಂದಾಳತ್ವ ತೆಗೆದುಕೊಂಡು ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡಲಾಗಿದೆ ಮೈ ಶುಗರ್ ಕಂಪನಿಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಮೈ ಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಮಾತನಾಡಿ ಜೂನ್ ಎರಡನೇ ವಾರದಲ್ಲಿ ಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ: ಕುಮಾರ ಅವರು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಅವರು ರೈತರ ಕಬ್ಬು ನುರಿಸಿ 14 ದಿನ ಮೇಲ್ಪಟ್ಟರು 4000 ರೈತರ 29 ಕೋಟಿ ರೂ ಹಣ ಪಾವತಿಸಬೇಕಿದೆ. ಮಾಚ್೯ 15 ರೊಳಗೆ ಪಾವತಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ರೈತರು 14 ದಿನದೊಳಗೆ ರೈತರಿಗೆ ಹಣ ಪಾವತಿಸಿಲ್ಲ ಇದರಿಂದ ಬಡ್ಡಿ ಸೇರಿಸಿ ರೈತರಿಗೆ ಹಣ ಪಾವತಿಸಬೇಕು. 14 ದಿನದೊಳಗೆ ಹಣ ಪಾವತಿ ಮಾಡದಿದ್ದಲ್ಲಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ರೈತರ ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುವುದು ಕಷ್ಟದ ವಿಷಯವಾಗಿದೆ. ಕಬ್ಬು ಕಟಾವಿಗೆ ದರ ನಿಗದಿಯಾಗಬೇಕು. ಮೈ ಶುಗರ್ ಲಾಭ ನಷ್ಟ ಕುರಿತು ವರದಿ ನೀಡಬೇಕು ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಸೇರಿದಂತೆ ರೈತ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.