“ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆ ಮೇಲೆ ಒದ್ದನಂತೆ” ಎನ್ನುವ ಆಡು ಮಾತಿನಂತೆ 420ಕುಮಾರ ಅವರು ತಮ್ಮ ಹುಳುಕು ಹೊರಬಿದ್ದಾಗ ಎಗರಿ ಬೀಳುತ್ತಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಕುಮಾರಸ್ವಾಮಿ ಮಾತಿನ ವಿಡಿಯೋ ತುಣಕನ್ನು ಎಕ್ಸ್ ತಾಣದಲ್ಲಿ ಹಂಚಿಕೊಂಡು ಪೋಸ್ಟ್ ಮಾಡಿರುವ ಕಾಂಗ್ರೆಸ್, “ಎಚ್ ಡಿ ಕುಮಾರಸ್ವಾಮಿ ಅವರೇ, ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನುಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ್ದು ಏಕೆ” ಎಂದು ಪ್ರಶ್ನಿಸಿದೆ.
“ನಿಮ್ಮ ಈ ಹಗರಣದ ಬಗ್ಗೆ ನಿಮ್ಮ ದೋಸ್ತಿ ನಾಯಕರಾದ ಯಡಿಯೂರಪ್ಪನವರೇ ಸದನದಲ್ಲಿ ಆರೋಪ ಮಾಡಿದ್ದಾರೆ, ಅದಕ್ಕೆ ತಮ್ಮ ಉತ್ತರವೇನು? ಲೋಕಾಯುಕ್ತದ ಪತ್ರ ಹೇಗೆ ಹೊರಬಿತ್ತು ಎಂದು ಕೇಳುವ ತಮ್ಮ ಡೋಂಗಿ ಪಾರದರ್ಶಕತೆ ಬಯಲಾಗಿದೆಯಲ್ಲವೇ?” ಎಂದು ಕುಟುಕಿದೆ.
“ಟೆಂಡರ್ ಅಧಿಕಾರಿಗಳು ಕೊಟ್ಟಿದ್ದು, ನಾನು ಕೇವಲ ರೆಕಮೆಂಡ್ ಮಾಡಿದ್ದು ಎನ್ನುತ್ತಿದ್ದೀರಿ, ಮುಖ್ಯಮಂತ್ರಿ ರೆಕಮೆಂಡ್ ಮಾಡಿದ್ದಕ್ಕೆ ಅಧಿಕಾರಿಗಳು ಮಣೆ ಹಾಕಿದ್ದಾರೆ ಎನ್ನುವುದನ್ನು ಏಕೆ ಮರೆಮಾಚುವಿರಿ” ಎಂದು ಕಾಂಗ್ರೆಸ್ ಕೇಳಿದೆ.
“ದಶಕದ ಹಿಂದಿನ ಹಗರಣದ ವಿಷಯ ಈಗ ಕೆದಕಿದ್ದು ತಪ್ಪು ಎಂಬಂತೆ ಮಾತಾಡುತ್ತಿದ್ದೀರಿ, ದಶಕದ ಹಿಂದೆ ಸಿದ್ದರಾಮಯ್ಯನವರ ಕುಟುಂಬಕ್ಕೆ ಬಿಜೆಪಿ ಸರ್ಕಾರವೇ ಇದ್ದಾಗ ಮಂಜೂರಾದ ಸೈಟ್ ಗಳ ಬಗ್ಗೆ ತಾವು ಈಗ ಕೆದಕಿದ್ದೀರಿ” ಎಂದು ಪ್ರಶ್ನಿಸಿದೆ.
“ಈ ಹಿಂದೆ ಇದೇ ನಿಮ್ಮ ರೆಕಮೆಂಡೇಷನ್ ಸಹಿ ನನ್ನದಲ್ಲ ಎಂದು ಸುಳ್ಳು ಹೇಳಿದ್ದಿರಿ ಅಲ್ಲವೇ? ಮಾನ್ಯ 420ಕುಮಾರ ಅವರೇ, ನಿಮ್ಮ ಸಾಚಾತನದ ಮುಖವಾಡ ನಾಡಿನ ಜನರ ಮುಂದೆ ಕಳಚಿದೆ, ರಾಜೀನಾಮೆ ಯಾವಾಗ ಕೊಡುವಿರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿ” ಎಂದು ಕಾಂಗ್ರೆಸ್ ಪ್ರಶ್ನೆಯನ್ನು ಮುಂದಿಟ್ಟಿದೆ.
ರಾಜ್ಯಪಾಲರಿಂದ ಯಾವುದೇ ಕ್ರಮ ಇಲ್ಲ
“ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿಗರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸೈಟ್ ಪಡೆಯುವ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರು ಹಸ್ತಕ್ಷೇಪ ಮಾಡಿದ್ದಕ್ಕಾಗಲಿ, ಪ್ರಭಾವ ಬೀರಿದ್ದಕ್ಕಾಗಲಿ ಯಾವುದೇ ದಾಖಲೆಗಳಿಲ್ಲ. ಮೂಡ ನಿವೇಶನ ಹಂಚಿಕೆಯ ಸಂದರ್ಭದಲ್ಲಿ ಅಧಿಕಾರದಲ್ಲಿದ್ದಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಒಂದು ಖಾಸಗಿ ದೂರಿನ ಆಧಾರದಲ್ಲಿ ತುರಾತುರಿಯಲ್ಲಿ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದ ರಾಜ್ಯಪಾಲರು ಕುಮಾರಸ್ವಾಮಿಯವರ ವಿರುದ್ಧದ ದೂರಿಗೆ ಸ್ಪಂದನೆ ಇಲ್ಲದೆ ಕುಳಿತಿರುವುದೇಕೆ? ಸಂವಿಧಾನತ್ಮಕವಾಗಿರುವ ಲೋಕಾಯುಕ್ತ ಸಂಸ್ಥೆಯೇ ತನಿಖೆಗೆ ಅನುಮತಿ ಕೇಳಿರುವಾಗ ರಾಜ್ಯಪಾಲರು ಯಾವುದೇ ಕ್ರಮ ವಹಿಸದೆ 9 ತಿಂಗಳಿಂದ ಕಡತವನ್ನು ಮುಚ್ಚಿಟ್ಟು ಕುಳಿತಿರುವುದೇಕೆ?” ಎಂದು ಹರಿಹಾಯ್ದಿದೆ.
“ಎಚ್ ಡಿ ಕುಮಾರಸ್ವಾಮಿ ಅವರೇ ಡಿನೋಟಿಫಿಕೇಶನ್ ಹಗರಣ, ಗಣಿ ಹಗರಣ ಸೇರಿದಂತೆ ನಿಮ್ಮ ವಿರುದ್ಧ ಹಲವು ಪ್ರಕರಣಗಳಿವೆ, ಸೆಕ್ಷನ್ 420 ಅಡಿಯಲ್ಲೂ ದೂರು ದಾಖಲಾಗಿದೆ. ಹೀಗಿದ್ದೂ ಯಾವ ನೈತಿಕತೆಯಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡುವಿರಿ ಮಿಸ್ಟರ್ 420ಸ್ವಾಮಿಗಳೇ?” ಎಂದು ವ್ಯಂಗ್ಯ ಮಾಡಿದೆ.