ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಮೈಕ್ರೋ ಫೈನಾನ್ಸ್ನವರ ಕಿರಿಕುಳ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿದ್ದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಕೊನೆಗೂ ಅಂಕಿತ ಹಾಕಿದ್ದಾರೆ.
ಹಲವು ಸಲಹೆಗಳನ್ನು ನೀಡಿರುವ ರಾಜ್ಯಪಾಲರು ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
ಈ ಹಿಂದೆಯೂ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯಪಾಲರ ಅನುಮೋದನೆಗಾಗಿ ಮೈಕ್ರೋ ಸುಗ್ರೀವಾಜ್ಞೆಯನ್ನು ಕಳುಹಿಸಿತ್ತು. ಆದರೆ ರಾಜಭವನ ಕೆಲ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿತ್ತು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹಲವಾರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಡಿವಾಣ ಹಾಕಲು ಮುಂದಾಗಿದೆ.
ಮುಂದಿನ ಅಧಿವೇಶನದಲ್ಲಿ ಅದರ ಸಾಧಕ ಮತ್ತು ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡುವ ನಿರ್ಧಾರ ಮಾಡಬೇಕಿದೆ.
ಸುಗ್ರೀವಾಜ್ಞೆಯಲ್ಲಿ ಏನಿದೆ?
ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ (ಬಲವಂತದ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ -2025ರ 8ನೇ ಕರಡಿನಲ್ಲಿ ಕಿರುಕುಳ ನೀಡುವವರ ವಿರುದ್ಧ ಪೊಲೀಸರು ತಕ್ಷಣ ದೂರು ದಾಖಲಿಸಿಕೊಳ್ಳಬೇಕು. ಕಿರುಕುಳ ನೀಡಿರುವುದು ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರು.ವರೆಗೆ ಗರಿಷ್ಠ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ವ್ಯವಹಾರ ನಡೆಸುವ ಯಾವುದೇ ಫೈನಾನ್ಸ್ ಕಂಪೆನಿ ಕಡ್ಡಾಯವಾಗಿ ನೋಂದಣಿ ಪ್ರಾಧಿಕಾರದ ಬಳಿ ನೋಂದಣಿ ಮಾಡಿಸಿಕೊಂಡು ಪರವಾನಗಿ ಪಡೆದಿರಬೇಕು. ನಿಯಮ ಬಾಹಿರವಾಗಿ ನಡೆದುಕೊಂಡರೆ ಪರವಾನಗಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಬಹುದು.
ಸಾಲಗಾರರ ದೂರು ಆಧರಿಸಿ ಅಥವಾ ಸ್ವಯಂಪ್ರೇರಿತವಾಗಿ ಮೈಕ್ರೋ ಫೈನಾನ್ಸ್ ಅಥವಾ ಸಂಸ್ಥೆಯ ನೋಂದಣಿ ರದ್ದು ಮಾಡಲು ಸಾಕಷ್ಟು ಕಾರಣಗಳು ಲಿಖಿತವಾಗಿ ಸಲ್ಲಿಕೆಯಾದಲ್ಲಿ ಸಂಸ್ಥೆಗೆ ನೋಟಿಸ್ ನೀಡಿ ಅವರ ಅಹವಾಲು ಆಲಿಸಿ ನೋಂದಣಿ ರದ್ದು ಮಾಡಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ಮೈಕ್ರೋ ಫೈನಾನ್ಸ್ ಸಂಸ್ಥೆಗೆ ರಾಜ್ಯದಲ್ಲಿನ ವಹಿವಾಟು ನಡೆಸಲು ಅವಕಾಶವೇ ನೀಡಬಾರದು ಎಂದಾದರೆ ಆರ್ಬಿಐಗೆ ಶಿಫಾರಸು ಮಾಡಲು ಸಹ ಅಧಿಕಾರ ನೀಡಲಾಗಿದೆ.
ಸುಗ್ರೀವಾಜ್ಞೆ ಜಾರಿಗೊಂಡ 30 ದಿನದೊಳಗೆ ರಾಜ್ಯದಲ್ಲಿರುವ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು ಆಯಾ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಆಗಬೇಕು. ಕಡ್ಡಾಯವಾಗಿ ಸ್ಥಳೀಯ ಕಚೇರಿ ಹೊಂದಬೇಕು. ಬಡ್ಡಿದರವನ್ನು ಫಲಕದಲ್ಲಿ ನಮೂದಿಸಬೇಕು. ಸಾಲಗಾರರಿಂದ ಯಾವುದೇ ಅಡಮಾನ ಇಟ್ಟುಕೊಳ್ಳುವಂತಿಲ್ಲ. ಹೆದರಿಸಿ, ಬೆದರಿಸಿ ಜಪ್ತಿ ಮಾಡುವಂತಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರಾಧಿಕಾರವಾಗಿ ಜಿಲ್ಲಾಧಿಕಾರಿಯವರನ್ನು ನೇಮಿಸಲಾಗುತ್ತದೆ. ಕಿರುಕುಳ ನೀಡಿದಾಗ ಪೊಲೀಸರು ದೂರು ಸ್ವೀಕರಿಸಬೇಕು. ಅಲ್ಲದೇ, ಡಿವೈಎಸ್ಪಿ ಮೇಲ್ಪಟ್ಟ ಅಧಿಕಾರಿಗಳು ಸ್ವಯಂಪ್ರೇರಿತ ಕೇಸ್ ಕೂಡ ದಾಖಲಿಸಿಕೊಳ್ಳಬಹುದೆಂದು ಕರಡು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.
ಸಾಲ ವಸೂಲಿಗಾಗಿ ಸಾಲಗಾರರಿಗೆ ಅವಮಾನ, ಹಿಂಸೆ, ಹಲ್ಲೆ, ಬಲವಂತವಾಗಿ ಆಸ್ತಿ, ದಾಖಲೆಗಳನ್ನು ಕಿತ್ತುಕೊಂಡರೆ ಶಿಕ್ಷೆ, ದಂಡಕ್ಕೆ ಅವಕಾಶ. ದಬ್ಬಾಳಿಕೆ, ದೌರ್ಜನ್ಯ, ಗೂಂಡಾಗಳು, ಬಾಡಿಗೆ ವ್ಯಕ್ತಿಗಳ ಬಳಕೆ, ಮನೆಗೆ ಭೇಟಿ ನೀಡುವುದು, ದೈನಂದಿನ ಕೆಲಸಕ್ಕೆ ಕಿರುಕುಳ ನೀಡಿದ್ರೆ ಲೈಸನ್ಸ್ ರದ್ದು. ನೋಂದಣಿ ಆಗದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿಗೆ ಯಾವುದೇ ರೀತಿಯಲ್ಲೂ ಸಾಲಗಾರರ ಮೇಲೆ ಒತ್ತಡ ಹಾಕುವಂತಿಲ್ಲ.
ಸಾಲಗಾರರು ಮತ್ತು ಸಾಲ ನೀಡಿದವರ ನಡುವಿನ ವ್ಯಾಜ್ಯಗಳನ್ನು ಪರಿಹರಿಸಲು ಓಂಬುಡ್ಸ್ಪರ್ಸನ್ ನೇಮಿಸಲು ಸರ್ಕಾರಕ್ಕೆ ಅವಕಾಶ. ಮೈಕ್ರೋ ಫೈನಾನ್ಸ್ ಸ್ಥಳೀಯವಾಗಿ ಕಚೇರಿ ಹೊಂದಿರಬೇಕು. ಗ್ರಾಹಕರಿಂದ ಸ್ವೀಕರಿಸಿದ ಹಣಕ್ಕೆ ಸಹಿ ಮಾಡಿದ ರಸೀದಿ ನೀಡುವುದು ಕಡ್ಡಾಯ.
ಸಾಲ ಪಡೆದವರು ಬಡ್ಡಿ, ಕಂತು ಪಾವತಿ ಸೇರಿದಂತೆ ಇನ್ನಿತರ ಯಾವುದೇ ವಿವರಗಳನ್ನು ಕೇಳಿದಾಗ ಕಂಪನಿಗಳು ಒದಗಿಸುವುದು ಕಡ್ಡಾಯ. ಜಿಲ್ಲಾಧಿಕಾರಿಗಳು ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲ್ವಿಚಾರಣೆ ಪ್ರಾಧಿಕಾರ ಆಗಿರುತ್ತದೆ. ಬೇರೆ ಅಧಿಕಾರಿಗಳನ್ನೂ ನೇಮಿಸಲು ಅವಕಾಶ ಕಲ್ಪಿಸಲಾಗಿದೆ.
ಸಕಾರಣಗಳಿದ್ದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಲೈಸನ್ಸ್ ರದ್ದುಗೊಳಿಸುವಂತೆ ಆರ್ಬಿಐಗೆ ಶಿಫಾರಸ್ಸು ಮಾಡಲು ಪ್ರಾಧಿಕಾರಕ್ಕೆ ಅವಕಾಶ. ಗ್ರಾಹಕರಿಗೆ ವಿಧಿಸುವ ಬಡ್ಡಿ ದರವನ್ನು ಕಚೇರಿ ಫಲಕದಲ್ಲಿ ಪ್ರದರ್ಶಿಸಬೇಕು. ಗ್ರಾಹಕರೊಂದಿಗೆ ಪತ್ರ, ಮೌಖಿಕವಾಗಿ ಕನ್ನಡದಲ್ಲಿ ವ್ಯವಹರಿಸಬೇಕು. ಲೈಸನ್ಸ್ ರಹಿತ ಸಂಸ್ಥೆಗಳು ಸಾಲ ವಸೂಲಿಗೆ ಕಿರುಕುಳ ನೀಡಿದ್ರೆ ಪರಿಹಾರ ಪಡೆಯಬಹುದು. ಸಾಲದಿಂದ ಸಂಪೂರ್ಣ ಬಿಡುಗಡೆಯನ್ನೂ ಕೋರಬಹುದು.
ಪ್ರತಿ 3 ತಿಂಗಳಿಗೊಮ್ಮೆ ಸಾಲ ಪಡೆದವರು, ಸಾಲ ವಿತರಣೆ ಮೊತ್ತ ಮತ್ತು ಬಡ್ಡಿ ಕುರಿತ ವಿವರಗಳನ್ನು ಪ್ರಾಧಿಕಾರಕ್ಕೆ ಮೈಕ್ರೋ ಫೈನಾನ್ಸ್ಗಳು ಒದಗಿಸಬೇಕು. ಈ ನಿಯಮವನ್ನು ಪಾಲಿಸದಿದ್ದರೆ ಸಂಸ್ಥೆಯವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶ. ಸಾಲ ವಿಚಾರದ ವ್ಯಾಜ್ಯಗಳು, ಮೇಲ್ಮನವಿಗಳು ಬಾಕಿ ಇದ್ದಲ್ಲಿ ಸಿವಿಲ್ ಕೋರ್ಟ್ಗಳು ಸಾಲಗಾರರಿಂದ ಬಡ್ಡಿ, ಸಾಲ ವಸೂಲಿ ಅರ್ಜಿಗಳನ್ನು ಪರಿಗಣಿಸಬಾರದು ಎಂದು ನೂತನ ಕಾಯಿದೆಯಲ್ಲಿ ತಿಳಿಸಲಾಗಿದೆ.