ರಾಜ್ಯ ಮಾಧ್ಯಮ ಅಕಾಡಮಿಯು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಿದೆ.
ಪ್ರತಿ ವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತೆ ಹೇಮಾ ವೆಂಕಟ್, ಪ್ರಾಧ್ಯಾಪಕ ಪೂರ್ಣಾನಂದ, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ, ಪತ್ರಕರ್ತ ಸೋಮಶೇಖರ್ ಪಡುಕೆರೆ ಹಾಗೂ ಚಿಂತಕ, ಬರಹಗಾರ ಎ ನಾರಾಯಣ್ ಸೇರಿದಂತೆ ಹಲವರು ಆಯ್ಕೆಯಾಗಿದ್ದಾರೆ.
ಈ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಕಟಣೆ ಹೊರಡಿಸಿದೆ. “ಜನವರಿ 8ರಂದು ನಡೆದ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿಗೆ ಅರ್ಹರ ಹೆಸರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದೆ.
ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ 30 ಪತ್ರಕರ್ತರು, ವಿವಿಧ ದತ್ತಿ ಪ್ರಶಸ್ತಿಗಳಿಗೆ 10 ಮಂದಿ ಚಿಂತಕರು, ಬರಹಗಾರರು ಹಾಗೂ 2025ನೇ ಸಾಲಿನ ವಿಶೇಷ ಪ್ರಶಸ್ತಿಗೆ ಸರಿತಾ ರೈ ಅವರನ್ನು ಆಯ್ಕೆ ಮಾಡಲಾಗಿದೆ.
ವಿಶೇಷ ಪ್ರಶಸ್ತಿಯು 1 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅಕಾಡೆಮಿ ಮತ್ತು ದತ್ತಿ ಪ್ರಶಸ್ತಿಗಳು 50,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತವೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಅಭಿಮನ್ಯು ದತ್ತಿ ಪ್ರಶಸ್ತಿ
ಅಭಿಮನ್ಯು ದತ್ತಿ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಚಂದ್ರಶೇಖರ್ ಬೆನ್ನೂರು ಆಯ್ಕೆಯಾಗಿದ್ದಾರೆ.


