ಎಂಬಿಬಿಎಸ್ ಮೊದಲ ವೃತ್ತಿಪರ ವರ್ಷದ ಪರೀಕ್ಷೆಗೆ ಮತ್ತೊಂದು ಪ್ರಯತ್ನ, ಮರುಮೌಲ್ಯಮಾಪನಕ್ಕೆ (Re-Evaluation) ಅವಕಾಶ ಒದಗಿಸಬೇಕೆಂದು ಒತ್ತಾಯಿಸಿ ಶುಕ್ರವಾರ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಜಗತ್ ಪ್ರಕಾಶ್ ನಡ್ಡಾ ಅವರಿಗೆ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮನವಿ ಸಲ್ಲಿಸಿದ್ದಾರೆ.
ಎಂಬಿಬಿಎಸ್ ಮೊದಲ ವೃತ್ತಿಪರ ವರ್ಷದ ಪರೀಕ್ಷೆಗೆ ನಿಗದಿಪಡಿಸಿರುವ ಗರಿಷ್ಠ ನಾಲ್ಕು ಪ್ರಯತ್ನಗಳ ಮಿತಿಯಿಂದಾಗಿ ಕರ್ನಾಟಕದಲ್ಲಿ 275 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಂಡಿದೆ.
ಪದವಿ ವೈದ್ಯಕೀಯ ಶಿಕ್ಷಣ ನಿಯಮಾವಳಿ (GMER–2019) ಯ ನಿಯಮ 7.7 ಪ್ರಕಾರ, ಎಂ.ಬಿ.ಬಿ.ಎಸ್. ಮೊದಲ ವರ್ಷದ ಪರೀಕ್ಷೆಯನ್ನು ಉತ್ತೀರ್ಣಗೊಳ್ಳಲು ವಿದ್ಯಾರ್ಥಿಗಳಿಗೆ ನಾಲ್ಕು ಪ್ರಯತ್ನಗಳಿಗೆ ಮಾತ್ರ ಅವಕಾಶವಿದ್ದು, ಅದನ್ನು ಮೀರಿದರೆ ವೈದ್ಯಕೀಯ ವಿದ್ಯಾಭ್ಯಾಸ ಮುಂದುವರಿಸಲು ಅನರ್ಹತೆ ವಿಧಿಸಲಾಗುತ್ತದೆ. ಈ ನಿಯಮವು ವಿಶೇಷವಾಗಿ ಕೋವಿಡ್–19 ಮಹಾಮಾರಿ ಸಮಯದಲ್ಲಿ ಶೈಕ್ಷಣಿಕ ವ್ಯತ್ಯಯಗಳನ್ನು ಎದುರಿಸಿದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಅವಧಿಯಲ್ಲಿ ಆನ್ಲೈನ್ ತರಗತಿಗಳ ಅಸಮರ್ಪಕತೆ ಮತ್ತು ಪರೀಕ್ಷೆಗಳ ಅನಿಶ್ಚಿತತೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಸರಿಯಾಗಿ ಅಧ್ಯಯನ ಮಾಡಲಾಗದೇ ವಿಫಲರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಲ್ಕು ಪ್ರಯತ್ನಗಳ ಬಳಿಕ ಅವರನ್ನು ಶಾಶ್ವತವಾಗಿ ಅನರ್ಹಗೊಳಿಸುವುದು ಮಾನವೀಯತೆಯ ವಿರೋಧವಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಅನೇಕ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ಕರ್ನಾಟಕ ಹೈಕೋರ್ಟ್ ಮರುಮೌಲ್ಯಮಾಪನ ನಡೆಸುವಂತೆ ಆದೇಶ ನೀಡಿದ್ದರೂ, ವಿಶ್ವವಿದ್ಯಾಲಯವು ಮರುಮೌಲ್ಯಮಾಪನವನ್ನು ನಿರಾಕರಿಸುತ್ತಿದೆ.
ಆದ್ದರಿಂದ ಈ ಕುರಿತು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಪ್ರೊ–ಚಾನ್ಸೆಲರ್ ಕೂಡ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ನಿಯಮ 7.7 ಅನ್ನು ಮರುಪರಿಶೀಲಿಸಿ ಮತ್ತೊಂದು ಅವಕಾಶ ಅಥವಾ ಮರುಮೌಲ್ಯಮಾಪನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಆಫ್ರಿಕಾದ ಚಾಡ್ ದೇಶದಲ್ಲಿ ವೀಸಾ ತೊಂದರೆಯಿಂದ ಸಿಲುಕಿಕೊಂಡಿರುವ ಹಕ್ಕಿಪಿಕ್ಕಿ ಜನಾಂಗದ ಕರ್ನಾಟಕದ 8 ಮಂದಿಯ ವೀಸಾ ನವೀಕರಣಕ್ಕಾಗಿ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ. ಈಗಾಗಲೇ ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರಿ ಕಚೇರಿಗೆ ಪತ್ರ ಬರೆಯಲಾಗಿತ್ತು ಅದಕ್ಕೆ ಸ್ಪಂದನೆ ದೊರೆತಿದೆ.
– ಡಾ.ಪ್ರಭಾ ಮಲ್ಲಿಕಾರ್ಜುನ್
ಸಂಸದರು.


