Homeಕರ್ನಾಟಕಮರಕುಂಬಿ ದಲಿತ ದೌರ್ಜನ್ಯ ಪ್ರಕರಣ | 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಐತಿಹಾಸಿಕ ತೀರ್ಪು ಪ್ರಕಟ

ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ | 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಐತಿಹಾಸಿಕ ತೀರ್ಪು ಪ್ರಕಟ

ಕೊಪ್ಪಳ ಜಿಲ್ಲೆಯ ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ಪ್ರಕಟವಾಗಿದ್ದು, 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮೂರು ಜನ ಅಪರಾಧಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಾದ ದಲಿತರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 101 ಆರೋಪಿಗಳ ಶಿಕ್ಷೆಯ ಪ್ರಕಟಣೆಯನ್ನು ಕಾಯ್ದಿರಿಸಿದ್ದ ನ್ಯಾಯಾಧೀಶರು ಗುರುವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.

ಬರೋಬ್ಬರಿ‌ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ಐದು ಸಾವಿರ ದಂಡ ಕೂಡ ವಿಧಿಸಲಾಗಿದೆ. ಮೂರು ಜನ ಅಪರಾಧಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ ಮತ್ತು ಎರಡು ಸಾವಿರ ದಂಡ ವಿಧಿಸಲಾಗಿದೆ. ದೇಶದಲ್ಲೇ ಅಪರೂಪದ ಪ್ರಕರಣ ಇದಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ದಲಿತರ ಮೇಲೆ ದೌರ್ಜನ್ಯ ಎಸಗಿ ದಲಿತರ ನಾಲ್ಕು ಗುಡಿಸಲಿಗೆ ಬೆಂಕಿ ಹಚ್ಚಿದ್ದರು. ದಲಿತರ ಬದುಕು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿತ್ತು.

ಇಲ್ಲಿಯವರೆಗೂ ವಿಚಾರಣೆ ನಡೆದು ಅಕ್ಟೋಬರ್ 21 ರಂದು 101 ಜನ ಆರೋಪಿಗಳು ಅಪರಾಧಿಗಳು ಅಂತ ನ್ಯಾಯಾಧೀಶರು ಘೋಷಣೆ ಮಾಡಿದ್ದರು. ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು. ಗುರುವಾರ ಅಟ್ರಾಸಿಟಿ, ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಶಿಕ್ಷೆಯ ಆದೇಶ ಆಗಿದೆ.

ಪ್ರಕರಣ ಹಿನ್ನೆಲೆ

2014ರ ಆಗಸ್ಟ್ 28ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದವರು ನಗರದಲ್ಲಿ ಪವರ್ ಸಿನಿಮಾ ನೋಡಲು ಮಂಜುನಾಥ ಮತ್ತು ಸಂಗಡಿಗರು ಹೋಗಿದ್ದರು. ಈ ಸಮಯದಲ್ಲಿ ಮಂಜುನಾಥ ಮೇಲೆ ಹಲ್ಲೆಯಾಗಿತ್ತು. ನಮ್ಮೂರಿನ ದಲಿತರೇ ಹಲ್ಲೆ ಮಾಡಿಸಿದ್ದಾರೆ ಅಂತ ಮಂಜುನಾಥ ಗ್ರಾಮದ ಜನರಿಗೆ ಹೇಳಿದ್ದನು. ಊರಿನ ಜನ ಆತನ ಮಾತು ನಂಬಿ ಮಂಜುನಾಥನ ಪರವಾಗಿ ದಲಿತರು ವಾಸಿಸುವ ಓಣಿಯ ಮೇಲೆ ಭಯಾನಕ ರೀತಿಯ ಹಲ್ಲೆ ಮಾಡಿದ್ದರು. ಅನೇಕ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಗುಡಿಸಲು ಸುಟ್ಟು ಬೂದಿಯಾಗಿದ್ದವು. ಅತ್ಯಂತ ನಿರ್ದಯವಾಗಿ ಕ್ರೌರ್ಯ ಎಸಲಾಗಿತ್ತು.

ಈ ಬಗ್ಗೆ ಭೀಮೇಶ್ ಅನ್ನೋರು‌ ದೂರು ನೀಡಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜೀವಾವಧಿ ಶಿಕ್ಷೆಗೆ ಗಿರಿಯಾದ ಅಪರಾಧಿ ಸಾವು

ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ 101 ಮಂದಿ ಪೈಕಿ ಅಪರಾಧಿ ಶುಕ್ರವಾರ ಮೃತಪಟ್ಟಿದ್ದಾನೆ.

ರಾಮಪ್ಪ ಲಕ್ಷ್ಮಣ ಭೋವಿ (44) ಮೃತ ಅಪರಾಧಿ. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟ ಮಾಡುತ್ತಿದ್ದಂತೆಯೇ ಅಪರಾಧಿ ರಾಮಪ್ಪ ಕೋರ್ಟ್ ‌ಆವರಣದಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ಹತ್ತಾರು ವರ್ಷಗಳಿಂದ ದಲಿತರ ಮೇಲೆ ಹಲ್ಲೆ

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ದಲಿತರ ಮೇಲೆ ಅವ್ಯಾಹತವಾಗಿ ಹಲ್ಲೆಗಳು ನಡೆಯುತ್ತಿವೆ. ದಾಖಲಾಗಿರುವ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ದಾಖಲಾದ ಒಟ್ಟು ಪ್ರಕರಣಗಳನ್ನು ಲೆಕ್ಕ ಹಾಕಿದರೆ ಸರಾಸರಿ ವಾರಕ್ಕೊಂದು ದೌರ್ಜನ್ಯ ಪ್ರಕರಣವು ಜಿಲ್ಲೆಯಲ್ಲಿ ನಡೆಯುತ್ತಿದೆ. ಜಿಲ್ಲಾಡಳಿತ ಮೂಕ ಪ್ರೇಕ್ಷಕನಂತೆ ಸುಮ್ಮನಿದೆ. ಸುಪ್ರೀಂ ಕೋರ್ಟಿನ ಆದೇಶದನ್ವಯ ಕನಿಷ್ಠ ವರ್ಷಕ್ಕೆ ನಾಲ್ಕು ಸಭೆಗಳನ್ನು ಮಾಡಿದ ಉದಾಹರಣೆಯೂ ಇಲ್ಲ.

ಇಷ್ಟೆಲ್ಲ ದೊಡ್ಡ ಸಂಖ್ಯೆಯಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದರೂ ಶಿಕ್ಷೆಯ ಪ್ರಮಾಣ ಕಮ್ಮಿ ಎಂದೇ ಹೇಳಬೇಕು. ಅನೇಕ ಪ್ರಕರಣಗಳನ್ನು ಪೊಲೀಸ ಠಾಣೆಯ ಮೆಟ್ಟಿಲೇರಲು ಬಿಡುವುದೇ ಇಲ್ಲ. ಪ್ರಕರಣ ದಾಖಲಾಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತದೆ. ಪ್ರಕರಣ ದಾಖಲಾದ ಮೇಲೆ ಒತ್ತಡ ಹೇರಿ ರಾಜಿ ಮಾಡಿಸುವ ಮತ್ತು ಪ್ರಕರಣ ಹಿಂತೆಗೆದುಕೊಳ್ಳುವಂತೆ ಮಾಡಲಾಗುತ್ತಿದೆ. ಜಿಲ್ಲೆಯ ರಾಜಕಾರಣ ಉಳ್ಳವರ, ಮೇಲ್ಜಾತಿಗಳ ಪರವಾಗಿ ಕೆಲಸ ಮಾಡುತ್ತಿದೆ. ಅಧಿಕಾರಿಗಳು ಅವರು ಹೇಳಿದಂತೆ ಕೆಲಸ ಮಾಡುವ ಕವಲೆತ್ತುಗಳಾಗಿದ್ದಾರೆ. ಇಂಥ ಸಂದರ್ಭದಲ್ಲಿ ಬಂದಿರುವ ಈ ತೀರ್ಪು ಐತಿಹಾಸಿಕವಾಗಿ ತುಂಬ ಮಹತ್ವದ್ದು ಎಂದು ವಿಶ್ಲೇಷಿಸಲಾಗಿದೆ.

ದೊಡ್ಡ ಸಂಖ್ಯೆಯ ಆರೋಪಿಗಳನ್ನು ಅಪರಾಧಿಗಳು ಹೇಳುವ ಈ ತೀರ್ಪು ಭಾರತದ ನ್ಯಾಯಾಂಗ ಇತಿಹಾಸದ ಪುಟ ಮಗ್ಗಲು ಬದಲಿಸುವಂತೆ ಮಾಡಿದೆ. ಚರಿತ್ರೆಯೇ ಬದಲಾಗುವಂಥ ತೀರ್ಪನ್ನು ನ್ಯಾಯಾಧೀಶರು ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments