Homeಕರ್ನಾಟಕವಿಬಿ ಗ್ರಾಮ್ ಜಿ ಕಾಯ್ದೆ ಮೂಲಕ ಮಹಾತ್ಮ ಗಾಂಧಿ, ಕಾರ್ಮಿಕರ ಬದುಕಿನ ಹತ್ಯೆ:  ಡಿ.ಕೆ. ಶಿವಕುಮಾರ್

ವಿಬಿ ಗ್ರಾಮ್ ಜಿ ಕಾಯ್ದೆ ಮೂಲಕ ಮಹಾತ್ಮ ಗಾಂಧಿ, ಕಾರ್ಮಿಕರ ಬದುಕಿನ ಹತ್ಯೆ:  ಡಿ.ಕೆ. ಶಿವಕುಮಾರ್

ಕೇಂದ್ರ ಬಿಜೆಪಿ ಸರ್ಕಾರ ವಿಬಿ ಗ್ರಾಮ್ ಜಿ ನೂತನ ಕಾಯ್ದೆ ಮೂಲಕ ಮಹಾತ್ಮ ಗಾಂಧಿ ಹಾಗೂ ಕಾರ್ಮಿಕರ ಬದುಕನ್ನು ಸಾಯಿಸುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಶಿವಮೊಗ್ಗ ಸರ್ಕಿಟ್ ಹೌಸ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಗುರುವಾರ ಮಾತನಾಡಿದರು.

ಮನರೇಗಾ ವಿಚಾರದ ಹೋರಾಟ ಮುಂದುವರಿಯುವುದೇ ಎಂದು ಕೇಳಿದಾಗ, “ಖಂಡಿತವಾಗಿ ಮನರೇಗಾ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ರೈತರ ವಿಚಾರದಲ್ಲಿ ಕಾಯ್ದೆಗಳನ್ನು ಯಾವ ರೀತಿ ಹಿಂಪಡೆದರೋ ಅದೇ ರೀತಿ ಇದನ್ನು ಹಿಂಪಡೆಯಬೇಕು. 6-7 ಸಾವಿರ ಕೋಟಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುತ್ತಿತ್ತು. ಕಾರ್ಮಿಕರಿಗೆ ಉದ್ಯೋಗದ ಹಕ್ಕು ನೀಡಲಾಗಿತ್ತು, ಪಂಚಾಯ್ತಿ ಸದಸ್ಯರೇ ತಮ್ಮ ವ್ಯಾಪ್ತಿಯಲ್ಲಿ ಯಾವ ಕೆಲಸ ಆಗಬೇಕು ಎಂದು ತೀರ್ಮಾನ ಮಾಡುತ್ತಿದ್ದರು. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿದರೆ ಅವರಿಗೆ ವೇತನ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಆಶ್ರಯ ಮನೆ, ಜಮೀನು ಮಟ್ಟ ಮಾಡುವ, ಇಂಗುಗುಂಡಿ ನಿರ್ಮಾಣಕ್ಕೆ ಕೂಲಿ ನೀಡಲಾಗುತ್ತಿತ್ತು. ಈ ಹಕ್ಕುಗಳನ್ನು ಕಸಿದು, ಇನ್ನು ಮುಂದೆ ದೆಹಲಿಯಿಂದ ಯಾವ ಕೆಲಸ ಆಗಬೇಕು ಎಂದು ತೀರ್ಮಾನಿಸಲಾಗುವುದು. ಮನರೇಗಾ ಯೋಜನೆ ಮೂಲಕ ನನ್ನ ಕ್ಷೇತ್ರದಲ್ಲಿ 54 ಸಾವಿರಕ್ಕೂ ಹೆಚ್ಚು ದನದ ಕೊಟ್ಟಿಗೆ ಕಟ್ಟಿಸಿದ್ದೇನೆ. ಒಂದೇ ವರ್ಷ 250 ಕೋಟಿ ವೆಚ್ಚ ಮಾಡಲಾಗಿದೆ. ನೂರಾರು ಚೆಕ್ ಡ್ಯಾಂ ನಿರ್ಮಿಸಲಾಗಿದೆ. ನಾನು ಹಣ ಹೊಡೆದಿದ್ದೇನೆ ಎಂಬ ಅನುಮಾನದ ಮೇಲೆ ಕೇಂದ್ರ ಸರ್ಕಾರ ದೆಹಲಿಯಿಂದ ತಂಡ ಕಳುಸಿಹಿ ತನಿಖೆ ಮಾಡಿಸಿತ್ತು. ನಂತರ ಈಶ್ವರಪ್ಪನವರೇ ಶಿಫಾರಸ್ಸು ಮಾಡಿ ನಮ್ಮ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರನ್ನು ದೆಹಲಿಗೆ ಕರೆಸಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತಂದ ಕ್ಷೇತ್ರ ಎಂದು ಪ್ರಶಸ್ತಿ ನೀಡಿದರು” ಎಂದರು.

ಹೊಸ ಕಾಯ್ದೆಯಿಂದ ಕಾರ್ಮಿಕರಿಗೆ ಸಂಕಷ್ಟ ಎದುರಾಗಲಿದ್ದು, ರಾಜ್ಯ ಸರ್ಕಾರ ಕಾರ್ಮಿಕರಿಗೆ ಯಾವ ಭರವಸೆ ನೀಡಲಿದೆ ಎಂದು ಕೇಳಿದಾಗ, “ನಾವು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಯೋಜನೆಗೆ ರಾಜ್ಯ ಸರ್ಕಾರ ಅನುದಾನ ನೀಡಲು ಆಗುವುದಿಲ್ಲ, ಕೇಂದ್ರ ಸರ್ಕಾರವೇ ಭರಿಸಬೇಕು. ಈ ಕಾಯ್ದೆ ಅನುಸಾರ ಯಾವ ಮಾರ್ಗಸೂಚನೆ ನೀಡುತ್ತಾರೆ ಕಾದು ನೋಡಬೇಕು” ಎಂದು ತಿಳಿಸಿದರು.

ರಾಜ್ಯದ ತೆರಿಗೆ ಹಣವನ್ನು ಜಾಹೀರಾತಿನ ಮೂಲಕ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಜಾಹೀರಾತು ನೀಡಿರುವುದರಲ್ಲಿ ತಪ್ಪೇನಿದೆ? ಮನರೇಗಾ ಯೋಜನೆ ಹೇಗೆ ಪ್ರಯೋಜನವಾಗುತ್ತಿತ್ತು, ಈಗ ನೂತನ ಕಾಯ್ದೆಯಿಂದ ಆಗುವ ಅನಾನುಕೂಲಗಳ ಬಗ್ಗೆ ನಮ್ಮದೇ ಆದ ಶೈಲಿಯಲ್ಲಿ ಜನರಿಗೆ ತಿಳಿಸುತ್ತೇವೆ. ನಾನು ರಂಗೋಲಿ ಸ್ಪರ್ಧೆಯನ್ನು ವೀಕ್ಷಣೆ ಮಾಡುವಾಗ ಗಣೇಶ ಚಿತ್ರದ ಮೇಲೆ ಸಾಗಿದೆ ಎಂದು ಬಿಜೆಪಿ ದಳದವರು ಟ್ರೋಲ್ ಮಾಡುತ್ತಿದ್ದಾರೆ. ಆ ಟ್ರೋಲ್ ಮಾಡಲು ಅವರದ್ದೂ ಒಂದೆರಡು ರೂಪಾಯಿ ಖರ್ಚಾಗಿರುತ್ತದೆಯಲ್ಲವೇ? ಒಬ್ಬೊಬ್ಬರು ಒಂದೊಂದು ವಿಚಾರದಲ್ಲಿ ಪ್ರಚಾರ ಮಾಡುತ್ತಾರೆ” ಎಂದರು.

ಆಡಳಿತದಲ್ಲಿ ಯತ್ರೀಂದ ಹಸ್ತಕ್ಷೇಪ ನೋಡಿಲ್ಲ

ಕೆ.ಜೆ. ಜಾರ್ಜ್ ಅವರು ಸಿಎಂ ಅವರಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಆರೋಪ ಮಾಡಿದ್ದಾರೆ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಜಾರ್ಜ್ ಅವರು ಬಹಳ ಹಿರಿಯ ಮಂತ್ರಿಗಳು. ಸ್ವಾಭಿಮಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಯಾವ ಸಮಸ್ಯೆ ಕಂಡಿಲ್ಲ. ನಮಗೆ ಈ ವಿಚಾರ ಮಾಧ್ಯಮಗಳ ಮೂಲಕ ನನಗೆ ಈಗ ತಿಳಿಯಿತು. ವಿರೋಧ ಪಕ್ಷದವರು ಏನಾದರೂ ಹೇಳುತ್ತಿರುತ್ತಾರೆ. ಅವರು ಹೇಳುವುದೆಲ್ಲ ಸತ್ಯ ಎಂದು ತಿಳಿಯಲು ಆಗುವುದಿಲ್ಲ” ಎಂದು ತಿಳಿಸಿದರು.

ಯತೀಂದ್ರ ಅವರ ಹಸ್ತಕ್ಷೇಪ ವಿಚಾರವಾಗಿ ಕೇಳಿದಾಗ, “ಕಾರ್ಯಕರ್ತರು ಬಂದು ಮನವಿ ಕೊಟ್ಟಾಗ ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಮಾಡಿಕೊಂಡಿರುತ್ತಾರೆ. ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ನನ್ನ ಬಳಿ ಎಲ್ಲಾ ಇಲಾಖೆಗೆ ಸಂಬಂಧಿಸಿದಂತೆ ಮನವಿ ನೀಡುತ್ತಾರೆ. ನಾನು ಎಲ್ಲಾ ಇಲಾಖೆ ಜೊತೆ ಮಾತನಾಡುತ್ತೇನೆ. ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಅವರು ಆಡಳಿತ ವಿಚಾರದಲ್ಲಿ ಯಾವ ಹಸ್ತಕ್ಷೇಪ ಮಾಡುವುದನ್ನು ನಾನು ನೋಡಿಲ್ಲ” ಎಂದರು.

ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಂದೂಡಿಕೆ ಬಗ್ಗೆ ಕೇಳಿದಾಗ, “ಅಪೆಕ್ಸ್ ಬ್ಯಾಂಕ್ ಚುನಾವಣೆ ಮುಂದೂಡಿಲ್ಲ, ಯಾರೂ ಅರ್ಜಿ ಹಾಕಿಲ್ಲ. ಪಕ್ಷ ತೀರ್ಮಾನ ಮಾಡುತ್ತದೆ” ಎಂದರು.

ಗುತ್ತಿಗೆದಾರರ ಸಂಘದವರು ಏಳು ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಕೇಳಿದಾಗ, “ಗುತ್ತಿಗೆದಾರ ಸಂಘದವರು ಏನು ಮಾತನಾಡಿದ್ದಾರೆ ಗೊತ್ತಿಲ್ಲ. ಅವರು ನನ್ನ ಬಳಿ ಬಂದು ಹೇಳಿಕೊಂಡ ಸಮಸ್ಯೆಗಳನ್ನು ನಾನು ಬಗೆಹರಿಸಿದ್ದೇನೆ” ಎಂದರು.

ಬೆಳಗಾವಿಯಲ್ಲಿ 400 ಕೋಟಿ ನಾಪತ್ತೆಯಾಗಿದ್ದು, ಇದು ಕಾಂಗ್ರೆಸ್ ಹಣ ಎಂಬ ಆರೋಪದ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳ ಕೈಯಲ್ಲೇ ಸಿಬಿಐ ಇದೆಯಲ್ಲಾ ತನಿಖೆ ಮಾಡಿಸಲಿ. ಯಾರ ಹಣ, ಯಾವ ಹಣ ನಮಗೆ ಈ ವಿಚಾರ ಗೊತ್ತಿಲ್ಲ. ತನಿಖೆ ಮಾಡಿ ಹೇಳಲಿ. ಸುಮ್ಮನೆ ಆರೋಪ ಮಾಡಿದರೆ ನಗೆಪಾಟಲಿಗೆ ಒಳಗಾಗಬೇಕಾಗುತ್ತದೆ” ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರವಾಗಿ ಕೇಳಿದಾಗ, “ನಾವು ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತೇವೆ. ನಾಳೆ ಅಥವಾ ನಾಡಿದ್ದು ಈ ಚುನಾವಣೆಗಳ ಮೀಸಲಾತಿ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ನಾವು ಪಂಚಾಯ್ತಿ ನಾಯಕರಿಗೆ ಸಿದ್ಥತೆ ಮಾಡಿಕೊಳ್ಳಲು ಹೇಳಿದ್ದೇವೆ. ರಾಜ್ಯ ಚುನಾವಣಾ ಆಯೋಗ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮತಪತ್ರ ಬಳಸಲು ತೀರ್ಮಾನಿಸಿದ್ದಾರೆ. ಸಮಯ ನಿಗದಿಯಾಗಬೇಕು ಅಷ್ಟೇ. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ರಕ್ಷಣೆಗೆ ಪಂಚಾಯ್ತಿ, ಪಾಲಿಕೆಗಳ ಚುನಾವಣೆ ಮಾಡಲು ತೀರ್ಮಾನಿಸಿದ್ದೇವೆ” ಎಂದರು.

ನೀವು ಎಲ್ಲಾ ಕಾರ್ಯಕ್ರಮಕ್ಕೆ ಹೋದರೂ ನಿಮ್ಮ ಅಭಿಮಾನಿಗಳು ನೀವು ಸಿಎಂ ಆಗಬೇಕು ಎಂದು ಕೂಗುತ್ತಿದ್ದಾರೆ ಎಂದು ಕೇಳಿದಾಗ, “ಈಗ ಆ ವಿಚಾರ ಚರ್ಚೆ ಬೇಡ, ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದ್ದೇನೆ. ನಮಗೆ ಪಕ್ಷ ಯಾವ ಜವಾಬ್ದಾರಿ ನೀಡಿದೆಯೋ ನಾನು ಆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ” ಎಂದರು.

ಸಿಎಂ ಆಗಲು ನಿಮ್ಮ ಪ್ರಯತ್ನ ಎಂದು ಕೇಳಿದಾಗ, “ನಾವು ನಮ್ಮ ಕಾರ್ಯಕರ್ತರು ಶ್ರಮಿಸಿದ ಕಾರಣಕ್ಕೆ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾರ್ಯಕರ್ತರೇ ನಮ್ಮ ಆಧಾರಸ್ತಂಭ” ಎಂದು ತಿಳಿಸಿದರು.

ನಿಗಮ ಮಂಡಳಿ ಅಧಿಕಾರ ಮುಂದುವರಿಸುವ ಬಗ್ಗೆ ಕೇಳಿದಾಗ, “ಶಾಸಕರಿಗೆ ನೇಮಕ ಮಾಡುವಾಗ 2 ವರ್ಷ ಅಥವಾ ಮುಂದಿನ ಆದೇಶ ಬರುವವರೆಗೆ ಎಂದು ಆದೇಶ ಮಾಡಲಾಗಿತ್ತು. ಅದರಂತೆ ಮುಂದಿನ ಆದೇಶ ಬಂದಾಗ ನೋಡೋಣ” ಎಂದರು.

ಬಹಳ ವರ್ಷಗಳ ಆಹ್ವಾನಗಳ ನಂತರ ಈ ಬಾರಿ ತರಳಬಾಳು ಹುಣ್ಣಿಮೆಯಲ್ಲಿ ಭಾಗಿ

“ಬಹಳ ವರ್ಷಗಳ ನಂತರ ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ನಡೆಯುತ್ತಿದೆ. ಅನೇಕ ವರ್ಷಗಳಿಂದ ನನಗೆ ಆಹ್ವಾನ ನೀಡಲಾಗಿತ್ತಾದರೂ ಕಾರಣಾಂತರಗಳಿಂದ ನಾನು ಬರಲು ಆಗಿರಲಿಲ್ಲ. ಈ ಬಾರಿ ಬರಲು ಒಪ್ಪಿಕೊಂಡೆ. ಈ ಬಾರಿಯೂ ನನಗೆ ವಿಶೇಷ ಅಧಿವೇಶನ ಹಾಗೂ ನನ್ನ ಕ್ಷೇತ್ರದಲ್ಲಿ ಕನಕೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಆದರೂ ಇವುಗಳ ಮಧ್ಯೆ ಇಲ್ಲಿಗೆ ಬಂದಿದ್ದೇನೆ” ಎಂದರು.

“ಕನಕೋತ್ಸವ ಇಡೀ ರಾಜ್ಯಕ್ಕೆ ಮಾದರಿಯ ಉತ್ಸವವಾಗಿದೆ. ಗ್ರಾಮೀಣ ಭಾಗದ ಕಲಾವಿರು, ಜನರು ತಮ್ಮ ಪ್ರತಿಭೆ ತೋರಿಸುವ ಉತ್ಸವವಾಗಿದೆ. ಐದು ಗ್ಯಾರಂಟಿ ಯೋಜನೆಗಳ ಕುರಿತು ಮನೆಗೊಂದು ರಂಗೋಲಿ ಎಂದು ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 73 ಸಾವಿರ ಜನ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸುಮಾರು 11 ಸಾವಿರ ಮುಸಲ್ಮಾನ ಬಾಂಧವರು ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಂದು ಸಾವಿರಾರು ಮಕ್ಕಳು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸುಮಾರು 4300 ಜನ ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ಮಾಡಿದ್ದಾರೆ. ಈ ಮಧ್ಯೆ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments