ಮಾಗಡಿ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಟರ್ ಗಳನ್ನು ಈಗಾಗಲೇ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮಾಗಡಿಯಲ್ಲಿ ಬುಧವಾರ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
“ಸತ್ತೇಗಾಲದಿಂದ ಇಗ್ಗಲೂರಿಗೆ 26 ಕಿ.ಮೀ, ಇಗ್ಗಲೂರಿನಿಂದ ಮೊಗೇನಹಳ್ಳಿಗೆ 58 ಕಿ.ಮೀ. ಮೊಗೇನಹಳ್ಳಿಯಿಂದ ಕಣ್ವಕ್ಕೆ 6 ಕಿ.ಮೀ, ಕಣ್ವದಿಂದ ವೈ.ಜಿ. ಗುಡ್ಡಕ್ಕೆ 25 ಕಿ.ಮೀ ಸೇರಿ ಒಟ್ಟು 115 ಕಿ.ಮೀ ಮಾರ್ಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರನ್ನು ಪಂಪ್ ಮಾಡಿ ಹರಿಸಲಾಗುವುದು. ನಾವು ಅಂತರ್ಜಲ ಹೆಚ್ಚಳ ಮಾಡಲು ಈ ನೀರು ತರುತ್ತಿದ್ದೇವೆ. ಇದಕ್ಕೆ 160 ಎಚ್.ಪಿ ಪಂಪ್ ಮೂಲಕ 115 ಕಿ.ಮೀ ದೂರಕ್ಕೆ ಲಿಫ್ಟ್ ಮಾಡಲಾಗುತ್ತಿದೆ. ಆಮೂಲಕ ಈ ಭಾಗದ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.
“ಇದರಿಂದ ರೈತರಿಗೆ ಶಕ್ತಿ ತುಂಬುವಂತಾಗುತ್ತದೆ. ಬಡ ರೈತನ ಬದುಕಿಸಲು, ಸಹಾಯ ಮಾಡಲು ರೈತರ ಮಕ್ಕಳಿಗೆ ಈ ಚಿಂತನೆ ಬರಲಿಲ್ಲವೇ? ಜನರಿಂದ ಮತ ಹಾಕಿಸಿಕೊಂಡು ರಾಜಕಾರಣ ಮಾಡಿಕೊಂಡಿರುವುದಲ್ಲ. ಜನ ನಮ್ಮನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಜನರ ಬದುಕಿನಲ್ಲಿ ಬಡಲಾವಣೆ ತರಲು ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ನಮ್ಮ ಕೆಲಸ ನೋಡಿ ನಾವು ಇಂತಹ ಕೆಲಸ ಮಾಡಲು ಆಗಲಿಲ್ಲವಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದರು
“ಕುಮಾರಣ್ಣ ಅವರು ಮಂಡ್ಯ ಸಂಸದರಾಗಿದ್ದಾರೆ, ಮದ್ದೂರಿನಲ್ಲಿ ರೈತರಿಗೆ ನಮ್ಮ ರೀತಿ ಟ್ರಾನ್ಸ್ಫಾರ್ಮರ್ ಹಾಕಿಸಲು ಹೇಳಿ ನೋಡೋಣ. ಕೇಂದ್ರ ಸರ್ಕಾರದಿಂದ ಹಣ ತಂದು ಮಂಡ್ಯದ ರೈತರಿಗೆ ಟ್ರಾನ್ಸ್ಫಾರ್ಮರ್ ಹಾಕಿಸಲಿ ಸಾಕು. ರೈತರ ಪಂಪ್ ಸೆಟ್ ಗಳಿಗೆ 10 ಹೆಚ್.ಪಿ ಉಚಿತ ವಿದ್ಯುತ್ ನೀಡಿದ್ದು ನಾವು, ಕಾಂಗ್ರೆಸ್ ಸರ್ಕಾರ. ಇಲ್ಲಿ ಬಂದಿದ್ದ ಕೆಲವು ಮಹಿಳಾ ಫಲಾನುಭವಿಗಳಿಗೆ ಪಟ್ಟಾ ದಾಖಲೆ ಕೊಟ್ಟಿದ್ದೇವೆ. ಅದರಲ್ಲಿ ಅವರ ಫೋಟೋ, ಅವರ ಮನೆ ಫೋಟೋ, ಇ ಖಾತಾ ನೀಡಿದ್ದೇವೆ. ಇದೇ ರೀತಿ 2.20 ಲಕ್ಷ ಜನರಿಗೆ ಆಸ್ತಿ ದಾಖಲೆ ನೀಡುವ ಮೂಲಕ ಭೂಮಿ ಗ್ಯಾರಂಟಿ ನೀಡಿದ್ದೇವೆ. ಅಶೋಕಣ್ಣ, ನಿಮ್ಮ ಅವಧಿಯಲ್ಲಿ, ಜನತಾ ದಳದ ಅವಧಿಯಲ್ಲಿ ಇಂತಹ ಕೆಲಸ ಮಾಡಲು ಆಗುತ್ತಿರಲಿಲ್ಲವೇ? ಉಳುವವನಿಗೆ ಭೂಮಿ, ಬಗರ್ ಹುಕ್ಕುಂ, ಅರಣ್ಯ ಭಾಗದ ರೈತರಿಗೆ ಜಮೀನು ಸೇರಿದಂತೆ ರೈತರ ಪರವಾಗಿ ದೆಹಲಿಯಲ್ಲಾದರೂ ಸರಿ, ರಾಜ್ಯದಲ್ಲಾದರೂ ಸರಿ ಯೋಜನೆ ರೂಪಿಸಿದ್ದರೆ ಅದು ಕಾಂಗ್ರೆಸ್ ಮಾತ್ರ. ಇಂತಹ ಒಂದೇ ಒಂದು ಕೆಲಸ ಮಾಡಲು ಆಗದಿದ್ದರೆ ಮತ್ಯಾಕೆ ಜನ ಮತ ಹಾಕಬೇಕು?” ಎಂದು ಕೇಳಿದರು.
ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ
“ಟಿವಿಯಲ್ಲಿ ಹೀಗೂ ಉಂಟೆ ಎಂಬ ಕಾರ್ಯಕ್ರಮವನ್ನು ಎಲ್ಲರೂ ನೋಡಿರುತ್ತೀರಿ. ನಾನು ಇಲ್ಲಿ ನಮ್ಮ ಕೆಲಸವನ್ನು ತೋರಿಸಲು ನಿಂತಿದ್ದೇನೆ ಹೊರತು, ಮುಂದೆ ಇಂತಹ ಕೆಲಸ ಮಾಡುತ್ತೇನೆ ಎಂದು ಹೇಳಲು ನಿಂತಿಲ್ಲ. ಶಾಸಕರಾಗಿ, ಸಂಸದರಾಗಿ ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ. ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ. ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ. ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ” ಎಂದು ತಿಳಿಸಿದರು.
“ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಮತಕ್ಕಾಗಿ ಬಂದಾಗ ಯಾರು ಏನು ಮಾಡಿದ್ದಾರೆ ಎಂದು ಕೇಳಬೇಕು. ಕಾಂಗ್ರೆಸ್ ಕಾರ್ಯಕರ್ತರು ನೀವುಗಳು ಬೇರೆ ಪಕ್ಷಗಳ ನಿಮ್ಮ ಸ್ನೇಹಿತರ ಜತೆ ಯಾರ ಕಾಲದಲ್ಲಿ ಯಾವ ಕೆಲಸ ಆಗಿದೆ ಎಂದು ಲೆಕ್ಕಾಚಾರ ಹಾಕಬೇಕು. ಅಧಿಕಾರ ಯಾರಿಗೆ ಇರಲಿಲ್ಲ? ದಳದ ಸಿಎಂ, ಪ್ರಧಾನಿ ಎಲ್ಲರಿಗೂ ಅಧಿಕಾರ ಇತ್ತಲ್ಲವೇ? ಅಧಿಕಾರದಲ್ಲಿ ಇದ್ದಾಗ ಯಾವ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ?” ಎಂದು ಪ್ರಶ್ನಿಸಿದರು.
ನಮ್ಮ ಗುರುತು ಉಳಿಸಿಕೊಳ್ಳಲು ಬೆಂಗಳೂರು ದಕ್ಷಿಣ ಜಿಲ್ಲೆ
“ಈ ಮಾಗಡಿ ಗುಡ್ಡಗಾಡು ಪ್ರದೇಶ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಈ ಜಿಲ್ಲೆಯನ್ನು ರಾಮನಗರ ಎಂದು ಮಾಡುವಾಗ ನಮ್ಮ ಹೆಸರು, ಗುರುತನ್ನು ಯಾಕೆ ತೆಗೆಯುತ್ತಿದ್ದೀರಿ? ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾದಾಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಂತಾ ಇತ್ತು. ಸುರೇಶ್ ಸಂಸದರಾಗಿದ್ದು ಬೆಂಗಳೂರು ಗ್ರಾಮಾಂತರಕ್ಕೆ. ಜಿಲ್ಲೆಯ ಕೇಂದ್ರಾಡಳಿತ ರಾಮನಗರದಲ್ಲೇ ಇರಲಿ, ಆದರೆ ಜಿಲ್ಲೆಯ ಹೆಸರಿನಲ್ಲಿ ಬೆಂಗಳೂರು ಹೆಸರನ್ನು ತೆಗೆಯಬೇಡಿ ಎಂದು ಕೇಳಿದೆ. ಆದರೆ ಅವರದ್ದು ಬೇರೆಯದೇ ಲೆಕ್ಕಾಚಾರ. ಆದರೆ ನೀವು ನಮಗೆ ಅಧಿಕಾರ ಮರಳಿ ನೀಡಿದ್ದೀರಿ, ಹೀಗಾಗಿ ನಮ್ಮ ಈ ಹಿಂದಿನ ಹೆಸರನ್ನು ಉಳಿಸಿಕೊಂಡು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಿಸಿದ್ದೇವೆ” ಎಂದು ತಿಳಿಸಿದರು.
“ನಮ್ಮ ಕೆಲಸ, ತೀರ್ಮಾನಗಳಿಂದ ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಾಗಿದೆ. ಬಿಡದಿ ಟೌನ್ ಶಿಪ್ ಯೋಜನೆ ಭೂಸಂತ್ರಸ್ತರಿಗೆ ನಾನು ಎಕರೆಗೆ 2.50 ಕೋಟಿ ಪರಿಹಾರ ನಿಗದಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಅಲ್ಲಿ ಎಕರೆಗೆ 6-7 ಸಾವಿರಕ್ಕೆ ಜಮೀನು ತೆಗೆದುಕೊಂಡಿದ್ದರು. ನಾನು ಕೂಡ ಎಕರೆಗೆ 7-8 ಲಕ್ಷಕ್ಕೆ 10-20 ಎಕರೆ ಜಮೀನು ಖರೀದಿ ಮಾಡಿದ್ದೇನೆ. ಭೂಸ್ವಾಧೀನವಾಗುವ ಕುಮಾರಸ್ವಾಮಿ ಅವರ ಜಮೀನಿಗೂ 2.50 ಕೋಟಿ ನಿಗದಿ ಮಾಡಿದ್ದೇವೆ. ನಾವು ಅಧಿಕಾರಕ್ಕೆ ಬಂದಾಗ ನಾವು ತೆಗೆದುಕೊಳ್ಳುವ ಒಂದು ತೀರ್ಮಾನ ಜನರಿಗೆ ಶಕ್ತಿ ತುಂಬುವಂತಿರಬೇಕು” ಎಂದು ಹೇಳಿದರು.
“ಮಂದೆಯೂ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುತ್ತದೆ. 18-20 ತಿಂಗಳಲ್ಲಿ ಈ ಯೋಜನೆ ಮಾಡಲು ಸೂಚಿಸಲಾಗಿದೆ. ಈ ಅಧಿಕಾರ ನಂದಲ್ಲ, ನಿಮ್ಮದು. ನೀವೆಲ್ಲರೂ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಬಾಲಕೃಷ್ಣ. ನಿಮ್ಮ ಹಿಂದೆ ನಾವು, ನಮ್ಮ ಹಿಂದೆ ನೀವು ಇರಬೇಕು. ಮುಂಖ್ಯಮಂತ್ರಿ ವಿಚಾರವಾಗಿ ಈಗ ಮಾತನಾಡುವುದಿಲ್ಲ, ಮಾತನಾಡಿದರೇ, ಅದನ್ನೇ ಬರೆಯುತ್ತಾರೆ. ಅದಕ್ಕೆ ಕಾಲ ಉತ್ತರ ನೀಡುತ್ತದೆ. ಸಧ್ಯದಲ್ಲೇ ಭೇಟಿಯಾಗಿ ನಿಮಗೆ ತಿಳಿಸುತ್ತೇನೆ” ಎಂದರು.


