Homeಕರ್ನಾಟಕಮದ್ದೂರು | ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, 21 ಬಂಧನ; ಬಿಜೆಪಿ-ಜೆಡಿಎಸ್‌ ಕಾರಣ ಎಂದ...

ಮದ್ದೂರು | ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, 21 ಬಂಧನ; ಬಿಜೆಪಿ-ಜೆಡಿಎಸ್‌ ಕಾರಣ ಎಂದ ಚಲುವರಾಯಸ್ವಾಮಿ

ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸಹಿಸಲು  ಆಗುತ್ತಿಲ್ಲ. ಸದನದಲ್ಲಿ ನಮ್ಮನ್ನು ಎದುರಿಸಲು ಅವರಿಗೆ ಆಗೋದಿಲ್ಲ. ಹೀಗಾಗಿ ಮದ್ದೂರಿನಂತಹ ಘಟನೆಗಳ ಹಿಂದೆ ಬಿಜೆಪಿ-ಜೆಡಿಎಸ್‌ನವರು ಪ್ರಚೋದನೆ ಕೊಡುವ ಕೆಲಸ ಮಾಡುತ್ತಿರುತ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ವಿಚಾರಕ್ಕೆ  ಪ್ರತಿಕ್ರಿಯಿಸಿದ್ದು, “ನಿನ್ನೆ ಮೆರವಣಿಗೆ ನಡೆಯುವ ಸಂಧರ್ಭದಲ್ಲಿ ಮಸೀದಿ ಕಡೆಯಿಂದ ಕಲ್ಲುಗಳು ಎಸೆದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ವಿಚಾರಣೆ ನಡೆಸಿ ನಂತರ ಇಪ್ಪತ್ತೊಂದು ಜನರನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.

“ಯಾವ ಹಿಂದೂಗಳ ಮೇಲೂ ಕೇಸ್ ದಾಖಲಾಗಿಲ್ಲ, ಗಲಭೆ ನಡೆದ ಕೆಲವೇ ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಘಟನೆ ನಡೆದ ತಕ್ಷಣ ಇಷ್ಟು ಬೇಗ ಕ್ರಮ ತೆಗೆದು ಕೊಂಡ ಪ್ರಕರಣ ಬೇರೆ ಯಾವುದೂ ಇಲ್ಲ‌. ಆದ್ರೆ ಬಿಜೆಪಿಯ ಹಾಗೂ ಕೆಲವು ಜೆಡಿಎಸ್ ನಾಯಕರು ಪ್ರಚೋದಿಸುವ ಕೆಲಸ ಮಾಡ್ತಾ ಇದ್ದಾರೆ” ಎಂದು ಆರೋಪಿಸಿದ್ದಾರೆ.

“ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲು ಹೇಳಬಹುದಿತ್ತು. ಅದು ಬಿಟ್ಟು ಕೋಮುಗಲಭೆಗೆ ಪ್ರಚೋದನೆ ಕೊಡಬಾರದಿತ್ತು. ಮದ್ದೂರಿನಲ್ಲಿ ಹಿಂದೆ ಎಂದೂ ಈ ರೀತಿಯ ಘಟನೆ ನಡೆದಿಲ್ಲ. ಹೊರಗಡೆಯಿಂದ ಬಂದು ಯಾರೋ‌ ಗಲಭೆ ಮಾಡಿರಬಹುದು ಎಂಬ ಬಗ್ಗೆ ವಿಚಾರಣೆ ಮಾಡ್ತಾ ಇದ್ದೇವೆ” ಎಂದು ತಿಳಿಸಿದ್ದಾರೆ.

“ಯಾವುದೇ ಸಮಾಜ ಇದ್ದರೂ ಅವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ತೀವಿ. ಬಿಜೆಪಿ, ಜೆಡಿಎಸ್ ನವರು ರಾಜಕಾರಣವಾಗಿ ನಮ್ಮನ್ನು ಎದುರಿಸಾಗದೆ ಪ್ರಚೋದನೆ ಮಾಡ್ತಾ ಇದ್ದಾರೆ. ನಾವು ಯಾರ ಓಲೈಕೆ ಸಹಾ ಮಾಡುತ್ತಿಲ್ಲ. ಹಾಗಿದ್ದರೆ ಯಾಕೆ ಇಪ್ಪತ್ತೊಂದು ಜನರ ಬಂಧನ ಮಾಡ್ತಾ ಇದ್ದೆವು” ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ಏನಿದು ಘಟನೆ?

ಮಂಡ್ಯ ಜಿಲ್ಲೆಯ ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಭಾನುವಾರ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ಮಾಡುವ ವೇಳೆ ಹಿಂದೂ ಮತ್ತು ಮುಸ್ಲಿಂ ಯುವಕರ ಗುಂಪಿನ ನಡುವೆ ಕಲ್ಲು ತೂರಾಟ ನಡೆದಿದೆ.

ಮದ್ದೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಘಟನೆಯಲ್ಲಿ ಒಟ್ಟು 8 ಮಂದಿಗೆ ಗಾಯಗಳಾಗಿದೆ. ಅವರೆಲ್ಲರನ್ನು ಚಿಕಿತ್ಸೆಗಾಗಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದ್ದೂರು ಪಟ್ಟಣದ ಸಿದ್ದಾರ್ಥ ನಗರದ 5ನೇ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಸೂಕ್ತ ಪೊಲೀಸ್ ಬಂದೋಬಸ್ತ್ ನಡುವೆ ಸಾಗುತ್ತಿತ್ತು. ರಾಮ್ ರಹೀಂ ನಗರದ ಮಸೀದಿ ಬಳಿ ಹೋದ ಸಂದರ್ಭ ರಾತ್ರಿ 8 ಗಂಟೆಯಲ್ಲಿ ಕಲ್ಲು ತೂರಾಟ ನಡೆದಿದೆ. ಕೆಲವೇ ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಮಸೀದಿ ಮೇಲೆಯೂ ಕಲ್ಲು ತೂರಾಟವಾಗಿತ್ತು. ಆಗ ಎರಡು ಕೋಮುಗಳ ಗುಂಪಿನ ನಡುವೆ ಘರ್ಷಣೆ ಉಂಟಾಗಿ, ತೀವ್ರ ಸ್ವರೂಪ ಪಡೆದಿತ್ತು.

ಭಾನುವಾರ ರಾತ್ರಿ ಮೊದಲಿಗೆ ಪ್ರಮುಖ ಬೀದಿಗಳಲ್ಲಿ ಗಣಪತಿ ಮೆರವಣಿಗೆ ಸಾಗಿ ಬಂದಿದೆ. ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು, ಮೈಕ್ ಹಾಕಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಮಸೀದಿ ಬಳಿ ಎರಡು ಕೋಮುಗಳ ಯುವಕರ ನಡುವೆ ಏಕಾಏಕಿ ಕಲ್ಲು ತೂರಾಟ ನಡೆದಿದೆ.

ಆ ಸಂದರ್ಭ ಎರಡು ಗುಂಪುಗಳ ಮುಖಂಡರು ಅಲ್ಲಿ ಜಮಾಯಿಸಿದರು. ಬಿಜೆಪಿ, ಆರ್.ಎಸ್.ಎಸ್., ಬಜರಂಗದಳ ಕಾರ್ಯಕರ್ತರು ಕೂಡ ಸ್ಥಳಕ್ಕೆ ಧಾವಿಸಿದರು. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದಿದ್ದಾರೆ.

ಈ ಘಟನೆ ಖಂಡಿಸಿ ಮದ್ದೂರಿನಲ್ಲಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಬಿಜೆಪಿ ಮುಖಂಡರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

ಕಳೆದ ವರ್ಷ ಇದೇ ಸಂದರ್ಭದಲ್ಲಿ ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ ಮಾಡಲಾಗಿತ್ತು. ಈ ವೇಳೆ ಕೋಟ್ಯಾಂತರ ರೂ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿತ್ತು.

21 ಜನರ ಬಂಧನ

ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಒಂದು ಮಸೀದಿಯ ಬಳಿ ಕಲ್ಲು ತೂರಾಟ ನಡೆದಿದೆ. ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಆ ವೇಳೆ ಕರೆಂಟ್ ಕೂಡ ಆಫ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 21 ಜನರನ್ನು ಬಂಧಿಸಲಾಗಿದೆ ಎಂದು ಮಂಡ್ಯ ಎಸ್​​ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಭಾನುವಾರ ರಾತ್ರಿ ನಡೆದ ಕಲ್ಲು ತೂರಾಟ ವಿಚಾರವಾಗಿ ಸೋಮವಾರ ಮಂಡ್ಯ ಎಸ್​​ಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments