ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದೆ. ಬೆಂಗಳೂರು, ಮೈಸೂರು, ದಾವಣಗೆರೆ ಜಿಲ್ಲೆಗಳಲ್ಲಿ ಹಲವು ಕಡೆ ಏಕಕಾಲಕ್ಕೆ ದಾಳಿ ನಡೆದಿದೆ.
ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇರೆಗೆ ದಾವಣಗೆರೆಯ ‘ಬೆಸ್ಕಾಂ’ ಸಿವಿಲ್ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಎಚ್. ಅರ್ಜುನ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
ಮೂಲತಃ ಶಿವಮೊಗ್ಗದ ಅರ್ಜುನ್ ಅವರು ‘ಬೆಸ್ಕಾಂ’ ದಾವಣಗೆರೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗದ ಗೋಪಾಳದದಲ್ಲಿರುವ ವಾಣಿಜ್ಯ ಸಂಕೀರ್ಣ, ರಿಪ್ಪನ್ಪೇಟೆಯ ತಳಲೆ ಬಳಿಯ ತೋಟದ ಮನೆ, ದಾವಣಗೆರೆಯ ನಿಟುವಳ್ಳಿ ಬಡಾವಣೆಯ ಕೊಠಡಿ ಹಾಗೂ ‘ಬೆಸ್ಕಾಂ’ ಕಚೇರಿಯ ಮೇಲೆ ದಾವಣಗೆರೆ ಮತ್ತು ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
‘ಅರ್ಜುನ್ ಅವರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ದೂರು ಬಂದಿತ್ತು. ಮನೆ, ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಲೊಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪುರೆ ಮಾಹಿತಿ ನೀಡಿದ್ದಾರೆ.
ಪುರುಷೋತ್ತಮ ದಾಸ್ ಮನೆ ಮೇಲೆ ದಾಳಿ
PWD ಚೀಫ್ ಇಂಜಿನಿಯರ್ ಪುರುಷೋತ್ತಮ ದಾಸ್ ಎಂಬುವವರಿಗೆ ಸೇರಿದ 11 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ (ನಡೆಸಿದ್ದಾರೆ. ಮೈಸೂರಿನಲ್ಲಿ 5 ಕಡೆ, ಬೆಂಗಳೂರಿನಲ್ಲಿ 6 ಕಡೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳ ಹುಡುಕಾಟ ನಡೆಸಿದ್ದಾರೆ.
ಸೋಮಲಿಂಗಪ್ಪ ಸಿದ್ದನಗೌಡರ್ ಮನೆ ಮೇಲೆ ದಾಳಿ
ಧಾರವಾಡದ ಸರ್ವೆ ಇಲಾಖೆ ಸೂಪರ್ವೈಸರ್ ಸೋಮಲಿಂಗಪ್ಪ ಸಿದ್ದನಗೌಡರ್ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ನಗರದ ಭಾರತಿನಗರ ಬಡಾವಣೆಯಲ್ಲಿರುವ ಮನೆ, ಐಸ್ ಗೇಟ್ ಬಳಿ ಇರುವ ಸರ್ವೆ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, ಬೆಳಗಾವಿ ಜಿಲ್ಲೆಯ ಮುರಗೋಡದಲ್ಲಿನ ಸೋಮಲಿಂಗಪ್ಪ ಅವರ ಮನೆ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸೂಪರಿಂಟೆಂಡೆಂಟ್ ಇಂಜಿನಿಯರ್ ಎಚ್ ಎಂ ಜನಾರ್ದನ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.



