ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಸಿಡಿಪಿಒ ಕಚೇರಿಯ ಎಫ್‌ಡಿಎ ನೌಕರ ರಾಜು ಸುವ್ರ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ನಸುಕಿನಲ್ಲಿ ದಾಳಿ ಮಾಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಈ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.
“ಕೆಲ ಮಾಹಿತಿಗಳು ಬಂದಿದ್ದವು. ಅವುಗಳ ಪರಿಶೀಲನೆ ನಡೆಸಿದಾಗ ದಾಖಲೆಗಳು ಲಭ್ಯವಾಗಿದ್ದವು. ಅದನ್ನು ಆಧರಿಸಿ ರಾಜು ಸುವ್ರ ಮನೆ ಮೇಲೆ ದಾಳಿ ಮಾಡಲಾಗಿದೆ. ತಪಾಸಣೆ ನಡೆಯುತ್ತಿದೆ” ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೀದರ್‌ನಲ್ಲೂ ದಾಳಿ
ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರಕುಮಾರ್ ರೊಟ್ಟಿ ಅವರ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಹನುಮಂತ ನೇತೃತ್ವದಲ್ಲಿ ದಾಳಿ ನಡೆದಿದೆ.
ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದ್ದು, ಬೀದರ್, ಬೆಂಗಳೂರು ನಿವಾಸ ಹಾಗೂ ಬೀದರ್‌ನ ನೌಬಾದ್‌ನಲ್ಲಿರುವ ಕಚೇರಿ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ನುಗ್ಗಿದ್ದಾರೆ.
ಬೀದರ್‌ನ ಕಮಲಾಪುರ ರಸ್ತೆಯ ಕಾಲೋನಿಯ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲಿಸುತ್ತಿದ್ದಾರೆ. ಬೀದರ್ ಡಿಸಿ ಕಚೇರಿಯಲ್ಲಿ ಶಿರಸ್ತೇದಾರ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ರವೀಂದ್ರಕುಮಾರ್ ಕಾರ್ಯನಿರ್ವಹಿಸಿದ್ದಾರೆ.