Homeಕರ್ನಾಟಕನಾಳೆ (ಜೂ.4) ಲೋಕಸಭಾ ಚುನಾವಣೆ ಫಲಿತಾಂಶ; ಮತ ಎಣಿಕೆ ಕೇಂದ್ರಗಳ ಸುತ್ತ ಪೊಲೀಸ್​​ ಭದ್ರತೆ

ನಾಳೆ (ಜೂ.4) ಲೋಕಸಭಾ ಚುನಾವಣೆ ಫಲಿತಾಂಶ; ಮತ ಎಣಿಕೆ ಕೇಂದ್ರಗಳ ಸುತ್ತ ಪೊಲೀಸ್​​ ಭದ್ರತೆ

ಸುದೀರ್ಘ ಎರಡು ತಿಂಗಳುಗಳ ಕಾಲ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆದಿದ್ದು, ಮಂಗಳವಾರ (ಜೂ.4) ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಕರ್ನಾಟಕದಲ್ಲಿ ಏಪ್ರಿಲ್‌ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ರಾಜ್ಯದ ಮತದಾರ ಯಾರತ್ತ ವಾಲಿದ್ದಾನೆ ಎಂಬುದ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ತೆರೆ ಬೀಳಲಿದೆ.

ರಾಜ್ಯದ 28 ಕ್ಷೇತ್ರಗಳಲ್ಲಿ ಒಟ್ಟು 584 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 25 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಡ್ಡಿದೆ. ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್‌ ನಡುವೆ ನೇರ ಸ್ಪರ್ಧೆ ಇದೆ.

ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಎಚ್‌ ಡಿ ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಿ ಕೆ ಸುರೇಶ್‌, ಡಾ. ಸಿ ಎನ್‌ ಮಂಜುನಾಥ್‌ ಸೇರಿದಂತೆ ಪ್ರಮುಖರು ಚುನಾವಣಾ ಕಣದಲ್ಲಿದ್ದಾರೆ. ಹಾಗೆಯೇ ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಜಿ ಬಿ ವಿಜಯ್‌ ಕುಮಾರ್‌ ಕಣದಲ್ಲಿದ್ದಾರೆ.

ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ ಮತ ಎಣಿಕೆ ಕಾರ್ಯಕ್ಕೆ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಹಿನ್ನೆಲೆ ಬೆಂಗಳೂರು ಸೇರಿದಂತೆ ಜಿಲ್ಲೆಗಳ ಮತ ಎಣಿಕೆ ಕೇಂದ್ರಗಳ ಸುತ್ತ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್​​ ಭದ್ರತೆ ನಿಯೋಜಿಸಲಾಗಿದೆ.

144 ಸೆಕ್ಷನ್ ಜಾರಿ

ಇವಿಎಂ ಮಷಿನ್​​ ಇರುವ ಕೇಂದ್ರಗಳಲ್ಲಿ ಸಿಆರ್​ಪಿಎಫ್ ಭದ್ರತೆ ಒದಗಿಸಲಾಗಿದ್ದು, ರಕ್ಷಣೆಗಾಗಿ ಕೆಎಸ್​ಆರ್​ಪಿ, ಸಿಎಆರ್​ ತುಕಡಿಗಳ ನಿಯೋಜನೆ ಮಾಡಲಾಗಿದೆ. ಕಾನೂನುಸುವ್ಯವಸ್ಥೆ, ಸೂಕ್ತ ರೆಗ್ಯುಲೇಟರಿ ವ್ಯವಸ್ಥೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಡಿಸಿಪಿ ಮಟ್ಟದ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದಾರೆ.ಮತ ಎಣಿಕೆ ಕೇಂದ್ರಗಳ ಹೊರಗೂ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಬೆಳಗಾವಿ: ಶಾಲಾ ಕಾಲೇಜುಗಳಿಗೆ ರಜೆ

ಬೆಳಗಾವಿಯ ಟಿಳಕವಾಡಿಯಲ್ಲಿರುವ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ನಾಳೆ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆ ಮತ ಎಣಿಕಾ ಕೇಂದ್ರದ ಸುತ್ತ ಮುತ್ತಲಿರುವ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಟಿಳಕವಾಡಿಯಲ್ಲಿರುವ ಇಪ್ಪತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ.

ಎಕ್ಸಿಟ್ ಪೋಲ್

ಮತಚಲಾವಣೆಯ ಅವಧಿ ಮುಗಿಯುತ್ತದ್ದಂತೆ ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಸಂಸ್ಥೆಗಳೊಂದಿಗೆ ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟುಗೊಂಡಿದ್ದು, ದೇಶದ ಮತದಾರರು ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದೇ ಹೇಳಿವೆ.

ಕೇಂದ್ರದಲ್ಲಿ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಮ್ಯಾಜಿಕ್ ಸಂಖ್ಯೆ 272 ಆಗಿದೆ. *ಕರ್ನಾಟಕದಲ್ಲೂ ಬಿಜೆಪಿ ಭರ್ಜರಿ ಮುನ್ನಡೆಯನ್ನು ಕಾಯ್ದುಕೊಳ್ಳಲಿವೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರ ಪಡೆಯುವ ಸಾಧ್ಯತೆ ಕಂಡುಬಂದಿದೆ. ಆದರೆ ಎಕ್ಸಿಟ್ ಪೋಲ್ ಭವಿಷ್ಯ ನಿಜವಾಗಲಿದೆಯೇ ಎಂಬುದಕ್ಕೆ ಮಂಗಳವಾರದ ಫಲಿತಾಂಶ ಉತ್ತರ ನೀಡಲಿದೆ.

ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, “ಈಗಾಗಲೇ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾವು ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ. ಈ ಸಮೀಕ್ಷೆಯನ್ನು ನಾವು ಸಂಪೂರ್ಣ ತಳ್ಳಿಹಾಕುತ್ತೇವೆ” ಎಂದು ತಿಳಿಸಿದ್ದಾರೆ.

“ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಬಂದ ಬಳಿಕ ರಾಜ್ಯದ ಆಡಳಿತ ಪಕ್ಷದ ಮುಖಂಡರಿಗೆ, ಮಾನ್ಯ ಮುಖ್ಯಮಂತ್ರಿಯಾದಿಯಾಗಿ ಸಚಿವರಿಗೂ ಕೂಡ ಎದೆಬಡಿತ ಹೆಚ್ಚಾಗಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments