ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆಗೆ ಯಾವುದೇ ಕಾರಣಕ್ಕೂ ಮರಳಿ ಬಿಜೆಪಿ ಟಿಕೆಟ್ ಕೊಡಬಾರದು. ಅವರಿಂದ ಪದೇ ಪದೇ ಸಂವಿಧಾನ ತಿದ್ದುಪಡಿ ಹೇಳಿಕೆಯಿಂದ ಪಕ್ಷ ಮುಜುಗರ ಅನುಭವಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ವಿಜಯಪುರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂವಿಧಾನ ಬದಲಾವಣೆ ಹೇಳಿಕೆಯನ್ನು ಪಕ್ಷ ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಹೆಗಡೆ ಹೇಳಿಕೆ ಖಂಡನೀಯ” ಎಂದು ತಿಳಿಸಿದರು.
“ಚುನಾವಣೆ ಹತ್ತಿರ ಬಂದಾಗ ಬಂದಿದ್ದಾರೆ. ಬಹುಶಃ ಅವರ ತಲೆ ಕೆಟ್ಟಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ಸಂವಿಧಾನ ತಿದ್ದುಪಡಿ ಅನಿವಾರ್ಯ ಎಂದಿದ್ದರು. ಅದು ನಿಜ ಸಹ. ಕೆಲವು ತಿದ್ದುಪಡಿ ಮಾಡಲು ಅಭ್ಯಂತರವಿಲ್ಲ. ಆದರೆ, ಯಾರೇ ಆಗಲಿ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದರೆ ಸಹಿಸಲ್ಲ” ಎಂದರು.
“ಬಿಜೆಪಿ ಸಂವಿಧಾನ ಬದ್ಧವಾಗಿ ಆಡಳಿತ ನಡೆಸುತ್ತಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಬಾರದೆಂಬುದು ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೂ ಸಂವಿಧಾನಕ್ಕೆ ವಿರೋಧಿವಾಗಿ ನೀಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅದನ್ನು ರದ್ದುಗೊಳಿಸಿ ಸಂವಿಧಾನದ ಆಶಯ ಈಡೇರಿಸಿತು” ಎಂದು ಹೇಳಿದರು.