- ಕೇಜ್ರಿವಾಲ್ ಭ್ರಷ್ಟನಲ್ಲ, ನಾನು ಸಂಪಾದಿಸಿರುವುದು ಪ್ರಾಮಾಣಿಕತೆ ಮಾತ್ರ
- ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ನಮ್ಮ ವಿರುದ್ಧ ಸಂಚು ರೂಪಿಸಿದ್ದರು
ಮದ್ಯ ಮಾರಾಟ ಭ್ರಷ್ಟಾಚಾರ ಪ್ರಕರಣದಿಂದ ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಆರೋಪ ಮುಕ್ತರಾಗಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ಮಾರಾಟ ಮಾಡಲು ಹೊಸ ನೀತಿ ರೂಪಿಸುವಲ್ಲಿ ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಅಬಕಾರಿ ನೀತಿ ಪ್ರಕರಣದಲ್ಲಿ ವಿನಾಯಿತಿ ನೀಡಿದ ಕೆಲವೇ ಕ್ಷಣಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಮಾಧ್ಯಮಗಳ ಮುಂದೆ ಭಾವುಕರಾಗಿ ಕಣ್ಣೀರು ಹಾಕಿದರು.
“ಕಳೆದ ಕೆಲವು ವರ್ಷಗಳಿಂದ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದ ರೀತಿಯನ್ನು ನೀವೆಲ್ಲರೂ ನೋಡಿದ್ದೀರಿ, ಇಂದು ನ್ಯಾಯಾಲಯ ನಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ. ನಾವು ಸದಾ ಸತ್ಯವೇ ಗೆಲ್ಲುತ್ತದೆ ಎಂದು ಹೇಳಿಕೊಂಡು ಬಂದಿದ್ದೆವು” ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಮ್ ಆದ್ಮಿ ಪಕ್ಷದ ವಿರುದ್ಧ ಸಂಚು ರೂಪಿಸಿ, ಪಕ್ಷದ ಐವರು ಪ್ರಮುಖ ನಾಯಕರನ್ನು ಬಂಧಿಸಿದರು. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯನ್ನೇ ಬಂಧಿಸಲಾಯಿತು. ಪ್ರತಿಯೊಂದು ಚಾನೆಲ್ನಲ್ಲಿ ನಮ್ಮನ್ನು ಭ್ರಷ್ಟರೆಂದು ಕರೆಯಲಾಯಿತು. ಕೇಜ್ರಿವಾಲ್ ಭ್ರಷ್ಟನಲ್ಲ. ನಾನು ಸಂಪಾದಿಸಿರುವುದು ಪ್ರಾಮಾಣಿಕತೆ ಮಾತ್ರ. ಇಂದು ನ್ಯಾಯಾಲಯವೇ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಎಎಪಿ ಪ್ರಾಮಾಣಿಕರು ಎಂದು ಹೇಳಿದೆ” ಎಂದು ಕಣ್ಣೀರು ಹಾಕುತ್ತ ನುಡಿದರು.


