Homeಕರ್ನಾಟಕಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ್ 

ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ್ 

ವೀರಶೈವ ಲಿಂಗಾಯತ ಸಮುದಾಯವು ಶಿರಸಂಗಿ ಲಿಂಗರಾಜ ದೇಸಾಯಿ, ವಾರದ ಮಲ್ಲಪ್ಪ, ಬಿ.ವಿ.ಭೂಮರೆಡ್ಡಿ ಅವರಂತಹ ಸಾಹಸಿ ಉದ್ಯಮಿಗಳ ದೀರ್ಘ ಇತಿಹಾಸ ಹೊಂದಿದೆ. ಆದ್ದರಿಂದ ಕೇವಲ ಕೃಷಿಗೆ ಸೀಮಿತರಾಗದೆ, ಸಮುದಾಯದ ಯುವಜನರು ಉದ್ಯಮ ವಲಯಕ್ಕೆ ಧುಮುಕಿ ಬೆಳವಣಿಗೆ ಹೊಂದಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ‌ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಝಿನೆಸ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು.

ಸಮುದಾಯದಲ್ಲಿ ಗುಬ್ಬಿ ತೋಟದಪ್ಪ, ಸರ್ ಪುಟ್ಟಣ್ಣ ಶೆಟ್ಟಿ ಅವರಂತಹ ಮಹಾಮಹಿಮರು ಉದ್ಯಮಶೀಲರಾಗಿ ಸಾಧನೆಗಳನ್ನು ಮಾಡಿ, ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. 1906ರಷ್ಟು ಹಿಂದೆಯೇ ಶಿರಸಂಗಿಯ ದೇಸಾಯಿ ಅವರಿಂದ ಇದಕ್ಕೆ ಭದ್ರ ಬುನಾದಿ ಬಿದ್ದಿದೆ. ಜತೆಗೆ ವೀರಶೈವ ಮಹಾಸಭಾ ಕೂಡ ಇದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇದರಿಂದಾಗಿ ವೀರಶೈವ ಲಿಂಗಾಯತ ಸಮುದಾಯವು ವ್ಯಾಪಾರ ವಹಿವಾಟು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಯಶಸ್ಸು ಕಾಣುವುದು ಸಾಧ್ಯವಾಗಿದೆ ಎಂದು ಅವರು ನೆನಪಿಸಿ ಕೊಂಡಿದ್ದಾರೆ.

ಎಂ ಬಿ ಪಾಟೀಲ್

ನಾವು ಕೈಗಾರಿಕೆ, ವ್ಯಾಪಾರ ಇತ್ಯಾದಿಗಳನ್ನು ಉದಾಸೀನ ಮಾಡಬಾರದು. ಇವು ಕೃಷಿಗೆ ಪೂರಕವಾಗಿ ನಮ್ಮ ಸಮುದಾಯದ ಆರ್ಥಿಕ ಬೆಳವಣಿಗೆಗೆ ಆಧುನಿಕ ಕಾಲದಲ್ಲಿ ನಿರ್ಣಾಯಕವಾಗಿವೆ. ಸರಕಾರದ ನೀತಿಗಳು ಕೂಡ ಉಪಯುಕ್ತವಾಗಿವೆ. ರಾಜ್ಯದಲ್ಲಿ ಯಾವುದೇ ಭಾಗದಲ್ಲಾದರೂ ಕೈಗಾರಿಕಾ ಬೆಳವಣಿಗೆಗೆ ಸೂಕ್ತ ಕಾರ್ಯ ಪರಿಸರ ಇದೆ. ಸಮುದಾಯದ ಪ್ರತಿಭಾವಂತರು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ರೀತಿಯ ಸಮಾವೇಶಗಳನ್ನು ಸರಕಾರವೂ ಪ್ರೋತ್ಸಾಹಿಸುತ್ತದೆ. ಇದರಿಂದ ಅಸ್ಮಿತೆ, ನೆಟ್ವರ್ಕಿಂಗ್ ಮತ್ತು ಹೂಡಿಕೆಗೆ ಇರುವ ಅವಕಾಶಗಳು ಗೊತ್ತಾಗುತ್ತವೆ. ರಾಜ್ಯದಲ್ಲಿ ನಾವೀನ್ಯತೆ, ಸಂಶೋಧನೆ, ತಯಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತಿತರ ವಲಯಗಳಲ್ಲಿ ಉಜ್ವಲ ಅವಕಾಶಗಳಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಈಶ್ವರ ಖಂಡ್ರೆ, ಶಾಸಕರಾದ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ನವೀನ್, ಫೋರಂನ ಬೆಂಗಳೂರು ಘಟಕದ ಅಧ್ಯಕ್ಷ ಸಂತೋಷ್ ಕೆಂಚಾಂಬ, ಮಾಜಿ ಶಾಸಕ ರುದ್ರಗೌಡ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments