ರಾಜ್ಯ ಸರ್ಕಾರದ ಮಹತ್ವದ ಜಾತಿ ಗಣತಿ ವರದಿಗೆ ಒಕ್ಕಲಿಗರ ಪ್ರಬಲ ವಿರೋಧದ ಬೆನ್ನಲ್ಲೇ ಇದೀಗ ಲಿಂಗಾಯತ ಸಮುದಾಯದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಗುರುವಾರ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಜಾತಿ ಗಣತಿ ವರದಿ ಬಗ್ಗೆ ಚರ್ಚೆ ನಡೆದಿದೆ.
ಸಭೆಯ ಬಳಿಕ ಮಾಹಿತಿ ನೀಡಿದ ಶಾಮನೂರು “ನಮ್ಮ ಸಮುದಾಯದ ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸಿಲ್ಲ. ಮನೆಯಲ್ಲೇ ಕುಳಿತು ವರದಿ ಸಿದ್ಧಪಡಿಸಲಾಗಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಈ ಮೂಲಕ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಾತಿ ಗಣತಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಹಲವರ ಮನೆಗಳಿಗೆ ಭೇಟಿ ನೀಡದೆ ವರದಿ ಸಿದ್ಧಪಡಿಸಲಾಗಿದೆ ಎಂಬ ದೂರುಗಳು ಇವೆ. ಈ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇದರಿಂದ ಸಮಾಜಕ್ಕೆ ತೀವ್ರ ಸ್ವರೂಪದ ನಷ್ಟವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಜಾತಿ ಜನಗಣತಿ ಲೋಪದೋಷ ಪರಿಹರಿಸಲು ವೀರಶೈವ ಲಿಂಗಾಯತ ಮಹಾಸಭಾ ಒತ್ತಾಯಿಸುತ್ತಿದೆ. ಜನಗಣತಿಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ನಾವು ಜಾತಿ ಗಣತಿಯ ವಿರೋಧಿಗಳಲ್ಲ, ಆದರೆ ಯಾವುದೇ ವರದಿ ವೈಜ್ಞಾನಿಕವಾಗಿರಬೇಕು ಎಂಬುದು ನಮ್ಮ ಒತ್ತಾಯ. ಈ ಜಾತಿ ಗಣತಿ ವರದಿ ಈಗಾಗಲೇ 8 ವರ್ಷದಷ್ಟು ಹಳೆಯದಾಗಿದೆ. ಹೊಸದಾಗಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಬೇಕು. ಸರ್ಕಾರ ಮತ್ತೊಮ್ಮೆ ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಬೇಕು” ಎಂದು ಶಾಮನೂರು ಒತ್ತಾಯಿಸಿದ್ದಾರೆ.
ಇದೇ ವೇಳೆ ಸುದ್ದಿಗಾರರು ಜಾತಿ ಗಣತಿ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ, “ನಾವು ಯಾರೂ ಸಿಎಂ ಭೇಟಿಗೆ ಹೋಗಲ್ಲ” ಎಂದು ಸ್ಪಷ್ಟಪಡಿಸಿದರು.