ನಾಡಿನ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನವೇ ಧರ್ಮಗ್ರಂಥವಾಗಲಿ. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಬದುಕುವ ಮೂಲಕ ಮನುವಾದವನ್ನು ಹಿಮ್ಮೆಟ್ಟಿಸೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಅಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ಮತ್ತು ಲಿಂಗತಾರತಮ್ಯವನ್ನು ಸಾರುವ ಅಲಿಖಿತ ಸಂವಿಧಾನ ಮನುಸ್ಮೃತಿಯನ್ನು ಸುಟ್ಟುಹಾಕಿದ್ದರು. ಶತಮಾನಗಳ ಕಾಲ ಜಾತಿ ಆಧಾರದಲ್ಲಿ ಸಮಾಜವನ್ನು ಶೋಷಣೆಗೊಳಪಡಿಸಿದ ಮನುಸ್ಮೃತಿಯನ್ನು ಬಾಬಾ ಸಾಹೇಬರು ಬೆಂಕಿಯಿಟ್ಟು ದಿನವಿದು” ಎಂದು ತಿಳಿಸಿದ್ದಾರೆ.
“ಇಂದು ನಾವೆಲ್ಲರೂ ನಮ್ಮೊಳಗೆ ಇನ್ನೂ ಉಳಿದಿರಬಹುದಾದ ಆ ಮನುಸ್ಮೃತಿಯ ಪಳೆಯುಳಿಕೆಗಳನ್ನು ಸುಟ್ಟು ಹಾಕಬೇಕು. ಆ ಅಲಿಖಿತ ಸಂವಿಧಾನದ ನಾಶವಾಗದೆ ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ನೀಡಿರುವ ಲಿಖಿತ ಸಂವಿಧಾನದ ಸಂಪೂರ್ಣ ಅನುಷ್ಠಾನ ಅಸಾಧ್ಯ” ಎಂದು ಹೇಳಿದ್ದಾರೆ.