Homeಕರ್ನಾಟಕಪೊಲೀಸರ ನಿಗೂಢ ನಡೆ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಸಿ ಟಿ ರವಿ ಆಗ್ರಹ

ಪೊಲೀಸರ ನಿಗೂಢ ನಡೆ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ: ಸಿ ಟಿ ರವಿ ಆಗ್ರಹ

ಈಗಲೂ ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಬೆಳಗಾವಿ ಆಯುಕ್ತ, ಎಸ್​ಪಿ ಮತ್ತು ಇನ್ನತರೆ ಅಧಿಕಾರಿಗಳು ನನ್ನ ಜೊತೆ ನಡೆದುಕೊಂಡ ರೀತಿ ನಿಗೂಢವಾಗಿತ್ತು. ಪೊಲೀಸರ ಅಧಿಕೃತ ಫೋನ್, ಖಾಸಗಿ ಫೋನ್​ ಕಾಲ್​ ಬಗ್ಗೆ ತನಿಖೆ ಆಗಲಿ. ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಬಿಜೆಪಿ ಎಮ್‌ಎಲ್‌ಸಿ ಸಿ ಟಿ ರವಿ ಆಗ್ರಹಿಸಿದರು.

ಹೈಕೋರ್ಟ್‌ ಆದೇಶದಂತೆ ಶುಕ್ರವಾರ ಪೊಲೀಸರ ಬಂಧನದಿಂದ ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಬಂದಿದ್ದ ಅವರು ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

“ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ನಿಂದಿಸಿದ್ದೇನೆ ಎಂಬ ಆರೋಪದಡಿ ನನ್ನನ್ನು ಬಂಧನ ಮಾಡಿರುವುದು ಮತ್ತು ನಂತರದಲ್ಲಿ ನಿಗೂಢವಾಗಿ ಪೊಲೀಸರು ನಡೆದುಕೊಂಡಿದ್ದಾರೆ. ಆ ಬಗ್ಗೆ ನನ್ನ ಕಡೆ ವಿಡಿಯೋಗಳಿವೆ.
ಪೊಲೀಸರು ನನ್ನ ಬಳಿಯ ಫೋನ್​ ಕಿತ್ತುಕೊಳ್ಳಲು ಯತ್ನಿಸಿದರು. ನಾನು ಕಾಂತಾರದ ದೈವದ ರೀತಿಯಲ್ಲಿ ಕೆಲವು ಸಲ ವರ್ತನೆ ಮಾಡಿದೆ. ಹೀಗಾಗಿ ನನ್ನ ಪೋನ್ ಕಿತ್ತುಕೊಳ್ಳಲು ಪೊಲೀಸರಿಗೆ ಆಗಲಿಲ್ಲ” ಎಂದರು.

“ರಾತ್ರಿ ಸುತ್ತಾಡುವಾಗ ಪೊಲೀಸರು ವಾಕಿ-ಟಾಕಿಯಲ್ಲಿ ಕಡಿಮೆ ಮಾತನಾಡುತ್ತಿದ್ದರು, ಪೋನ್​ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದರು. ಕೆಲವು ಕರೆ ಸೇವ್ ಆಗಿರುವ ನಂಬರ್‌ಗಳಿಂದ, ಕೆಲವು ಕರೆ ಅನ್‌ನೋನ್‌ ನಂಬರ​ಗಳಿಂದ ಬರುತ್ತಿದ್ದವು. ನನ್ನ ಜೊತೆ ಸ್ಕಾರ್ಪಿಯೋದಲ್ಲಿ ರಾಮದುರ್ಗ ಡಿವೈಎಸ್ಪಿ ಚಿದಂಬರ್​, ಬೆಳಗಾವಿ ಮಾರ್ಕೆಟ್ ಠಾಣೆ ಎಸ್​ಐ ಗಂಗಾಧರ್, ಕಿತ್ತೂರು ಎಸ್​ಐ ಇದ್ದರು” ಎಂದು ತಿಳಿಸಿದರು.

“ರಾತ್ರಿ ನನ್ನ ಅಂಕಲಗಿ ಠಾಣೆಗೆ ಕರೆದುಕೊಂಡು ಹೋದರು. ಆಗ ಏನಾದರೂ ತಿನ್ನಿ ಸಾರ್ ನಮ್ಮದು ಕರ್ಮದ ಜೀವನ, ತಿನ್ನಿ ಸಾರ್ ಎಂದರು. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಬಂದರು. ನಾನು ವೈದ್ಯರಿಗೆ ಪೆಟ್ಟು ಬಿದ್ದಿರುವ ಜಾಗ ತೋರಿಸಿದೆ. ಲಿವರ್​ಗೆ ಸ್ವಲ್ಪ ಪೆಟ್ಟು ಬಿದ್ದಿದೆ ಸ್ಕ್ಯಾನಿಂಗ್ ಮಾಡೋಕೆ ವೈದ್ಯರು ಹೇಳಿದರು. ನಂತರ ನನ್ನ ಹೊರಗೆ ಕೂರಿಸಿ ಪೊಲೀಸರು ಒಳಗೆ ಹೋಗಿ ವೈದ್ಯರ ಜೊತೆಗೆ ಮಾತನಾಡಿದರು” ಎಂದು ಹೇಳಿದರು.

“ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಗುಂಡು ಹೊಡೆದು ಸಾಯಿಸಲು ಪ್ಲ್ಯಾನ್‌ ಮಾಡಿದ್ದರಾ ಅಂತ ನನಗೆ ಅನುಮಾನವಿದೆ. ಗೃಹ ಸಚಿವರ ಹಿಡಿತದಲ್ಲೇ ಗೃಹ ಇಲಾಖೆ ಇದೆಯಾ ಎಂಬ ಅನುಮಾನ ಇದೆ. ಕರ್ತವ್ಯ ಲೋಪ‌ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ” ಎಂದು ಒತ್ತಾಯಿಸಿದರು.

“ಯಾಕೆ ರಾತ್ರಿಯೆಲ್ಲ ಪೊಲೀಸರು ಸುತ್ತಾಡಿಸಿದರು ಅಂತ ನನಗೆ ಗೊತ್ತಿಲ್ಲ. ಯಾವನು ಡೈರೆಕ್ಷನ್ ಕೊಟ್ಟಿದಾನೋ ಗೊತ್ತಿಲ್ಲ. ಇದೆಲ್ಲ ರವಿ ಜನಪ್ರಿಯತೆ ಜಾಸ್ತಿಯಾಗಲು ನಾವೇ ಅವಕಾಶ ಕೊಟ್ಟಂತಾಯಿತು ಎಂದು ಸಚಿವ ಪರಮೇಶ್ವರ್ ನನ್ನ ಸ್ನೇಹಿತರ ಜೊತೆ ಮಾತಾಡುವಾಗ ಅಂದಿದ್ದಾರೆ” ಎಂದರು.

“ಸದನದ ಒಳಗೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಸಭಾಪತಿಯವರ ಅನುಮತಿ ಇಲ್ಲದೇ ಪ್ರಕರಣ ದಾಖಲಿಸಿರುವುದು ಮತ್ತು ಬಂಧಿಸಿರುವುದು ಅಪರಾಧ. ಬಂಧನದ ಬಳಿಕ 15 ಗಂಟೆಗಳ ಕಾಲ ಪೊಲೀಸರು ನನ್ನನ್ನು ಸುತ್ತಾಡಿಸಿದರು. ಈ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಪೊಲೀಸರ ಮೇಲೆ ಪ್ರಭಾವ ಬೀರಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಿ, ಅವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

“ಡಿ ಕೆ ಶಿವಕುಮಾರ್ ಚಿಕ್ಕಮಗಳೂರಿನ ಸಂಸ್ಕೃತಿ ಬಗ್ಗೆ ಮಾತಾಡಿದ್ದಾರೆ. ನಾನು ಬೆಳೆದ ಬಂದ ಹಾದಿ, ಅವರು ಬೆಳೆದು ಬಂದ ರೀತಿ ಏನು ಅಂತ ಚಿಕ್ಕಮಗಳೂರಿನ ಜನತೆಗೆ ಗೊತ್ತಿದೆ. ನಾನು ತಪ್ಪು ಮಾಡಿದ್ದರೇ ಕಾನೂನು ಪ್ರಕಾರ ಶಿಕ್ಷೆ ‌ಏನು ಬೇಕಾದರೂ ಆಗಲಿ ಅನುಭವಿಸುತ್ತೇನೆ. ರೇವಣ್ಣ, ಮುನಿರತ್ನ, ನನ್ನ ಮೇಲೆ ನಡೆದಿದ್ದನ್ನು ನೋಡಿದರೇ ಇದು ಷಡ್ಯಂತ್ರದ ಒಂದು ಭಾಗ”‌ ಎಂದು ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments