ಪ್ರಲ್ಹಾದ ಜೋಶಿ ಸಾಹೇಬರ ಅಭಿವೃದ್ಧಿ ಕೆಲಸ ಕ್ಷೇತ್ರದಲ್ಲಿ ಹಳ್ಳ ಹಿಡಿದಿದೆ. ದೇಶದ ಸಾಲ ಎಷ್ಟಿದೆ ಅಂತ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ಅವರೇ ದೇಶದ ಜನರಿಗೆ ತಿಳಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ಮೋದಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುವುದು ನನಗಂತೂ ಗೊತ್ತಿಲ್ಲ. ರೈತರ ಸಾಲ ಮನ್ನಾ, ಆದಾಯ ದ್ವಿಗುಣ ಮಾಡುತ್ತೇನೆ ಅಂದಿದ್ದರು. ಯಾವ ರೈತರ ಆದಾಯ ದ್ವಿಗುಣ ಆಗಿದೆ” ಎಂದು ಪ್ರಶ್ನಿಸಿದರು.
“ಚುನಾವಣೆ ಬಂದಿದ್ದಕ್ಕೆ ಹಿಂದು-ಮುಸ್ಲಿಂ ವಿಷಯ ತರುತ್ತಿದ್ದಾರೆ. ಈ ದೇಶದಲ್ಲಿ ಅಜಿಮ್ ಪ್ರೇಮ್‍ಜಿ ಹೆಚ್ಚು ದಾನ ಮಾಡಿದ್ದಾರೆ. ಅವರೊಬ್ಬ ಮುಸ್ಲಿಂ ಸಮುದಾಯದವರು. 30 ಬಿಲಿಯನ್ ಡಾಲರ್ ಅವರು ದಾನ ಮಾಡಿದ್ದಾರೆ” ಎಂದರು.
“ಚುನಾವಣೆ ಬಂದಾಗ ಹಿಂದು-ಮುಸ್ಲಿಂ ಆಗುತ್ತೆ ಅಂತ ನಮಗೆ ಗೊತ್ತೇ ಇದೆ. ರಾಮ ಮಂದಿರ, ಹಿಂದು-ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನ ವಿಚಾರ ಬರುತ್ತೆ. ನಾವು ಯಾವ ದೇಶಕ್ಕೆ ಹೋಲಿಕೆ ಮಾಡಬೇಕು? ಎಲ್ಲಾ ಸರಕುಗಳು ಚೈನಾದಿಂದ ಬರುತ್ತಿವೆ. ಮೇಕ್ ಇನ್ ಇಂಡಿಯಾ ಎಲ್ಲಿದೆ? ಮೇಕ್ ಇನ್ ಇಂಡಿಯಾಗೆ 450 ಕೋಟಿ ಖರ್ಚ ಆಯ್ತು. ಇದರ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರಾ? ಭಾರತ ಪಾಸ್ ಪೋರ್ಟ್ ಪವರ್ 85ನೇ ಸ್ಥಾನಕ್ಕಿದೆ. ಪವರ್ ಫುಲ್ ಪ್ರಧಾನಿ ಇದ್ದಾರೆ ಅಂದರೇ, ಮೊದಲನೆ ಸ್ಥಾನದಲ್ಲಿ ಇರಬೇಕಿತ್ತಲ್ಲ” ಎಂದು ಲೇವಡಿ ಮಾಡಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಅನ್ನು ಬ್ಯಾನ್ ಮಾಡಿದ್ದರು. ನಾನು ಸುಳ್ಳು ಹೇಳುತಿಲ್ಲ, ಬೇಕಿದ್ದರೆ ಬಿಜೆಪಿಯವರನ್ನು ಕೇಳಿ. ದಾಖಲೆ ತೆಗದು ನೋಡಲಿ. ಇದೀಗ ಅವರೇ ಸರ್ದಾರ್ ವಲ್ಲಭಭಾಯಿ ಪಟೇಲ್ರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣವಾಯ್ತು, ಮುಂದೇನು? ಇವರ ಸಿದ್ಧಾಂತವೆ ನನಗೆ ಅರ್ಥವಾಗುತಿಲ್ಲ. ಆರ್ಎಸ್ಎಸ್, ಬಿಜೆಪಿಯವರು ಯಾರ ಪರ ಇದ್ದಾರೋ? ಯಾರ ವಿರುದ್ಧ ಇದಾರೋ? ಅರ್ಥವಾಗುತ್ತಿಲ್ಲ” ಎಂದರು.
“ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ಚೈನಾದವರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಎಲ್ಲಾದರೂ ಒಂದು ಪೋಸ್ಟರ್ ಇದೆಯಾ? ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ವಾಗ್ದಾಳಿ ಮಾಡಿದರು.