ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ನಮ್ಮ ಪಕ್ಷದ ಉಸಾಬರಿ ಯಾಕೆ? ಅವರ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. ಮೊದಲು ಅದನ್ನು ಸರಿಪಡಿಕೊಂಡು ಮಾತನಾಡಲಿ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆರ್ ಅಶೋಕ್ ಎಲ್ಲದಕ್ಕೂ ಪ್ರತಿಕ್ರಿಯಿಸಲು ಹೋಗುತ್ತಾರೆ. ಮೊದಲು ತಮ್ಮ ಪಕ್ಷದ ಒಳ ಬೇಗುದಿಯನ್ನು ಸರಿಪಡಿಸಿಕೊಳ್ಳಲಿ” ಎಂದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರ ಅಮೆರಿಕಾ ಪ್ರವಾಸ ಬಗ್ಗೆ ಮಾತನಾಡಿ, “ಡಿ ಕೆ ಶಿವಕುಮಾರ್ ಅವರು ಸರ್ಕಾರದ ಕೆಲಸದ ಮೇಲೆ ಅಮೆರಿಕ ಹೋಗಿಲ್ಲ. ಅವರ ಕುಟುಂಬ ಸದಸ್ಯರ ಜೊತೆ ಹೋಗಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಮಾಧ್ಯಮಗಳು ಇಲ್ಲದ ಬಣ್ಣ ಹಚ್ಚುತ್ತಿದ್ದಾರೆ” ಎಂದರು.
‘ನಾನು ಒಂದಲ್ಲಾ ಒಂದು ದಿನ ಮುಖ್ಯಮಂತ್ರಿಯಾಗುವೆ’ ಎಂಬ ಸಚಿವ ಎಂ ಬಿ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, “ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಅಪ್ರಸ್ತುತ. ಮುಡಾ ಪ್ರಕರಣ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸೋಮವಾರ ಕೂಡ ವಾದ, ಪ್ರತಿವಾದ ನಡೆಯಲಿದೆ. 12ನೇ ತಾರೀಖಿಗೆ ತೀರ್ಪು ಬರಲಿದೆ. ಮುಖ್ಯಮಂತ್ರಿ ಚರ್ಚೆಯನ್ನೇ ಪ್ರಾರಂಭಿಸುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.
“ಸಚಿವ ಸತೀಶ್ ಜಾರಕಿಹೊಳಿ ಭೇಟಿಗೆ ಸುಮ್ಮನೇ ನಾನಾ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ. ನಮ್ಮ ಮಧ್ಯ ಯಾವ ವಿಚಾರಗಳ ಚರ್ಚೆ ನಡೆದಿಲ್ಲ. ನೀವೇ (ಮಾಧ್ಯಮದವರು) ಇಲ್ಲದ ಕಥೆ ಕಟ್ಟಬೇಡಿ” ಎಂದು ಸ್ಪಷ್ಟಪಡಿಸಿದರು.
ನಟ ದರ್ಶನ್ ವಿಚಾರವಾಗಿ ಮಾತನಾಡಿ, “ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದೆ. ಈ ಬಗ್ಗೆ ನ್ಯಾಯಾಲಯವೇ ತೀರ್ಪು ಕೊಡಲಿದೆ. ನಾವು ನೀವು ಮಾತನಾಡುವುದು ಅನವಶ್ಯಕ” ಎಂದರು.