ನಾಡಹಬ್ಬ ಮೈಸೂರು ದಸರಾಗೆ ಗುರುವಾರ ಅದ್ಧೂರಿ ಚಾಲನೆ ದೊರೆಯಿತು. ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ, “ಯುದ್ಧ, ಅಮಾಯಕರ ಮಾರಣಹೋಮ ನಿಲ್ಲಲಿ, ಅದಕ್ಕಾಗಿ ರಾಷ್ಟ್ರ ನಾಯಕರು ಜೀವಪರ ಧೋರಣೆ ತಳೆಯಲು ಚಾಮುಂಡಿ ಪ್ರೇರಣೆ ನೀಡಲಿ, ಹೆಣ್ಣು ಭ್ರೂಣ ಹತ್ಯೆ ತಡೆಯಲು ತಾಯಿ ತಂದೆಯರಿಗೆ ಸದ್ಬುದ್ಧಿ ಅನುಗ್ರಹಿಸಲಿ” ಎಂಬ ಕೋರಿಕೆಗಳನ್ನು ಮಂಡಿಸಿ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
“ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ, ಅಮಾಯಕ ಮುಗ್ಧರಿಗೇ ಕಷ್ಟ ಕೊಡುವರು. ಈ ದೇವರುಗಳು ಕೂಡ ಕೋಳಿ, ಕುರಿ, ಮೇಕೆ ಬಲಿ ಬೇಡುವರೆ ಹೊರತು ಹುಲಿ, ಸಿಂಹ, ಚಿರತೆ ಕಿರುಬ ಬಲಿ ಕೊಡಿ ಎಂದು ಕೇಳಲು ಹೆದರಿಕೆ’ ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದ ಅವರು, “ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲಿ. ಯುವಕರು ಮೋದಿ ಮೋದಿ ಎಂದು ಮುಂದುವರಿಯುತ್ತಿದ್ದಾರೆ. ಹಾಗೆಂದು ಸರ್ಕಾರ ಅಸ್ಥಿರಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು. ಜೀವನವೇ ದೊಡ್ಡ ಅಖಾಡ, ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು” ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನುದ್ದೇಶಿಸಿ ಧೈರ್ಯ ತುಂಬಿದರು.
“ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಶಾಸನ ಸಭೆ ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆಗೆ ಅಡ್ಡಿ ಮಾಡುತ್ತಲೇ ಇದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗಕೂಡದೆಂದು ಬೆದರಿಸುವ ಒಂದು ದೇಶವೂ ಇದೆಯೆಂಬುದು ಶೋಚನೀಯವಷ್ಟೇ ಅಲ್ಲ, ಖಂಡನೀಯ” ಎಂದರು.
“ಕೆಡವುಹುದು ಸುಲಭ, ಕಟ್ಟುವುದು ಕಷ್ಟ. ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾರಷ್ಟೆ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷದಲ್ಲಿ ಸಜ್ಜಾಗಬಹುದು” ಎಂದು ಹೇಳಿದರು.
ಭಾಷಣದ ಕೊನೆಗೆ, “ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ ಆರು ವರ್ಷ ಸಹಪಾಠಿಯಾಗಿಯೂ 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿಸುತ್ತೇನೆ” ಎಂದು ಅವರು ಗದ್ಗದಿತರಾದರು. ತೀರ್ಥಂಕರರ ಪುತ್ಥಳಿ ನೀಡಿ ಹಂಪಾನಾ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.