ಸಚಿವ ಎಂ ಬಿ ಪಾಟೀಲ್ ಅವರ ವರ್ತನೆಯನ್ನು ನಮ್ಮ ಪಕ್ಷ ಖಂಡಿಸುತ್ತದೆ. ಈ ಕೂಡಲೇ ಸಚಿವರು ಛಲವಾದಿ ನಾರಾಯಣ ಸ್ವಾಮಿ ಹಾಗೂ ಪರಿಶಿಷ್ಟ ಸಮುದಾಯಗಳಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ಛಲುವಾದಿ ನಾರಾಯಣಸ್ವಾಮಿ ಅವರು ಪರಿಶಿಷ್ಟ ಸಮುದಾಯದವರು ಎಂಬುವ ಕಾರಣಕ್ಕೆ ಅವರು ಗೌರವಾನ್ವಿತ ವಿರೋಧ ಪಕ್ಷದ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರ ಸ್ಥಾನದ ಘನತೆಯನ್ನೂ ಲೆಕ್ಕಿಸದೇ, ಅವಹೇಳನಕಾರಿ ಹಾಗೂ ಕಚೋದ್ಯದ ಪದ ಉಪಯೋಗಿಸುವ ಎಂ ಬಿ ಪಾಟೀಲ್ ಅವರು ಪದ ಸಂಸ್ಕೃತಿ ಇಲ್ಲದ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಂಡಿದ್ದಾರೆ. ಆ ಮೂಲಕ ಪರಿಶಿಷ್ಟ ಸಮುದಾಯದವರೊಬ್ಬರು ಉನ್ನತ ಸ್ಥಾನ ಅಲಂಕರಿಸಿರುವುದನ್ನು ಸಹಿಸಲಾಗದ ಅಸೂಯೆ ಹೊರಹಾಕಿದ್ದಾರೆ” ಎಂದು ಟೀಕಿಸಿದ್ದಾರೆ.
“ಪರಿಶಿಷ್ಟ ಸಮುದಾಯದ ಹೋರಾಟಗಾರನೊಬ್ಬನನ್ನು ಗುರುತಿಸಿ ಬಿಜೆಪಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳ್ಳಿರಿಸಿದೆ. ತಮ್ಮ ಜವಾಬ್ದಾರಿ ನಿರ್ವಹಿಸುವ ನಿಟ್ಟಿನಲ್ಲಿ ಕೆಐಎಡಿಬಿಯಲ್ಲಿ ನಡೆದಿರುವ ಸಿಎ ನಿವೇಶನಗಳ ನಿಯಮಬಾಹಿರ ಹಾಗೂ ಅಕ್ರಮ ಮಂಜೂರಾತಿ ಕುರಿತು ಛಲವಾದಿಯವರು ಆರೋಪ ಮಾಡಿದ್ದಾರೆ. ಇದನ್ನು ಆರೋಗ್ಯಕರ ಮನಸ್ಸಿನಿಂದ ಸ್ವೀಕರಿಸಿ ಮಾರುತ್ತರಿಸಬೇಕಾದ ಎಂ.ಬಿ ಪಾಟೀಲರು ಪ್ರತಿಕ್ರಿಯಿಸಿರುವ ಪರಿಯನ್ನು ನೋಡಿದರೆ ಅವರು ತಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಓಲೈಸುವ ಭರದಲ್ಲಿ ತಳಮಟ್ಟದಿಂದ ಮೇಲೆದ್ದು ಬಂದು ಗೌರವಾನ್ವಿತ ಸ್ಥಾನ ಅಲಂಕರಿಸಿರುವ ಪರಿಶಿಷ್ಟ ಸಮುದಾಯದ ವ್ಯಕ್ತಿಯನ್ನು ಅಪಮಾನಿಸುವ ಮೂಲಕ ಪರಿಶಿಷ್ಟರ ಬಗ್ಗೆ ತಮಗಿರುವ ಗೌರವ ಯಾವ ಮಟ್ಟದ್ದು ಎನ್ನುವುದನ್ನು ಪ್ರದರ್ಶಿಸಿಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳಿರಬೇಕು ಅದರಲ್ಲೂ ಆಡಳಿತ ಪಕ್ಷದಲ್ಲಿರುವವರು ವಿರೋಧ ಪಕ್ಷದ ಟೀಕೆಗಳನ್ನು ಸಕಾರಾತ್ಮಕ ಮನಸ್ಸಿನಿಂದ ಸ್ವೀಕರಿಸುವ ಔದಾರ್ಯ ತೋರಬೇಕು. ಆದರೆ ಹತಾಶೆ ಗೊಳಗಾದವರಂತೆ ವರ್ತಿಸುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದಂತೆ. ಈ ನಿಟ್ಟಿನಲ್ಲಿ ಎಂಬಿ ಪಾಟೀಲರು ಪ್ರಜಾತಂತ್ರ ವ್ಯವಸ್ಥೆಯನ್ನು ಅಪಮಾನಿಸಿದ್ದಾರೆ, ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ವ್ಯಕ್ತಿತ್ವವನ್ನು ಅವಹೇಳನ ಮಾಡಿರುವುದು ಇಡೀ ಪರಿಶಿಷ್ಟ ಸಮುದಾಯವನ್ನು ಅಪಮಾನಿಸಿದಂತಾಗಿದೆ” ಎಂದಿದ್ದಾರೆ.