Homeಕರ್ನಾಟಕಕುಮಾರಸ್ವಾಮಿಯೇ ನಿಂತರೂ ಗೆಲ್ಲುವುದು ಮಾತ್ರ ಯೋಗೇಶ್ವರ್:‌ ಸಿಎಂ ಸಿದ್ದರಾಮಯ್ಯ

ಕುಮಾರಸ್ವಾಮಿಯೇ ನಿಂತರೂ ಗೆಲ್ಲುವುದು ಮಾತ್ರ ಯೋಗೇಶ್ವರ್:‌ ಸಿಎಂ ಸಿದ್ದರಾಮಯ್ಯ

ಕುಮಾರಸ್ವಾಮಿಗೆ ಚನ್ನಪಟ್ಟಣ ಮರೆತುಹೋಗಿ ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ಬಿಜೆಪಿ ಒಕ್ಕೂಟದಿಂದ ಕುಮಾರಸ್ವಾಮಿಯೇ ನಿಲ್ಲಲಿ, ನಿಖಿಲ್ ಕುಮಾರಸ್ವಾಮಿಯೇ ನಿಲ್ಲಲಿ, ಶ್ರೀಮತಿ ಅನಿತಾ ಕುಮಾರಸ್ವಾಮಿಯವರೇ ನಿಲ್ಲಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಯೋಗೀಶ್ವರ್ ಅವರೇ ಭರ್ಜರಿ ಜಯಗಳಿಸೋದು ಖಚಿತ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸಿ ಪಿ ಯೋಗೀಶ್ವರ್ ಪರ ರೋಡ್ ಶೋನಲ್ಲಿ‌ ಭಾಗವಹಿಸಿ ಮಾತನಾಡಿದ ಅವರು, “ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ನಾನೂ ನೋಡ್ತೀನಿ. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ವರ್ ಅವರು ಜಯಗಳಿಸಬೇಕು” ಎಂದು ಕರೆ ನೀಡಿದರು.

“ಕೆರೆಗಳಿಗೆ ಜೀವದಾನ ಮಾಡಿದ ಯೋಗೀಶ್ವರ್ ಅಭಿವೃದ್ಧಿ ಪರವಾಗಿ ಇರುವುದರಿಂದಲೇ ಐದು ಬಾರಿ ಶಾಸಕರಾಗಿದ್ದು ಕಾಂಗ್ರೆಸ್ಸಿಗೆ ಮರಳಿದ್ದಾರೆ. ಇವರನ್ನು ನಾವೆಲ್ಲಾ ಸ್ವಾಗತಿಸಿದ್ದೇವೆ. ಯೋಗೀಶ್ವರ್ ಗೆಲ್ಲುವ ಮೂಲಕ‌ ಚನ್ನಪಟ್ಟಣದಲ್ಲಿ ನಿಂತು ಹೋಗಿರುವ ಅಭಿವೃದ್ಧಿಗೆ ಮರು ಚಾಲನೆ ನೀಡಿ” ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಏನು ಮಾಡಿದ್ದಾರೆ: ಡಿಕೆಶಿ ಪ್ರಶ್ನೆ

“ಎರಡು ಬಾರಿ ಸಿಎಂ ಆಗಿದ್ದಾಗ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಕೊಡುಗೆ ಏನು ಎನ್ನುವ ಪಟ್ಟಿಯನ್ನು ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿ. ಕ್ಷೇತ್ರದ ಅಭಿವೃದ್ದಿಗೆ ಅವರ ಸಾಕ್ಷಿ ಗುಡ್ಡೆಯನ್ನು ಜನರ ಮುಂದಿಡಲಿ” ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಪ್ರಶ್ನಿಸಿದರು.

“ಶುಭ ಘಳಿಗೆಯಲ್ಲಿ ಯೋಗೇಶ್ವರ್ ಪಕ್ಷ ಸೇರಿದ್ದಾರೆ. ಇವರ ಕೈ ಬಲಪಡಿಸುವುದರ ಮೂಲಕ ದೇಶಕ್ಕೆ ಬಲವಾದ ಸಂದೇಶ ನೀಡಬೇಕು. ಅತಿ ಹೆಚ್ಚು ಮತಗಳ ಅಂತರದಿಂದ ಇವರನ್ನು ಗೆಲ್ಲಿಸಬೇಕು. ಮುಂದಿನ ದಿನಗಳಲ್ಲಿ ಮಿಕ್ಕ ವಿಚಾರಗಳನ್ನು ನಾನು ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ನಾವು ನೋಡಬೇಕಿದೆ. ಚುನಾವಣೆ ಗೆಲ್ಲುವುದೊಂದೇ ನಮ್ಮ ಗುರಿ. ಲೋಕಸಭಾ ಚುನಾವಣೆ ಯಲ್ಲಿ ಡಿ.ಕೆ.ಸುರೇಶ್ ಅವರಿಗೆ ಚನ್ನಪಟ್ಟಣದ ಜನತೆ 80 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ್ದರು. ಆದರೆ ಮಿಕ್ಕ ಕಡೆ ಕಡಿಮೆ ಮತಗಳು ಬಂದ ಕಾರಣಕ್ಕೆ ಗೆಲುವು ಸಾಧ್ಯವಾಗಲಿಲ್ಲ” ಎಂದರು.

ಕಾರ್ಯಕರ್ತರ ಕೈ ಬಿಡುವುದಿಲ್ಲ, ಅವರೊಟ್ಟಿಗೆ ನಾವಿದ್ದೇವೆ

“ಡಿ.ಕೆ.ಶಿವಕುಮಾರ್ ಹಾಗೂ ಸುರೇಶ್ ಅವರನ್ನು ನಂಬಿ ಬಿಜೆಪಿ ಮತ್ತು ದಳದಿಂದ ಅನೇಕ ಕಾರ್ಯಕರ್ತರು ಬಂದಿದ್ದಾರೆ. ನೀವು ನಮ್ಮ ಕೈ ಬಲಪಡಿಸಿದ್ದೀರಿ, ಯಾವುದೇ ಕಾರಣಕ್ಕೂ ನಿಮ್ಮ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ನಡು ನೀರಿನಲ್ಲಿ ಕೈ ಬಿಡುವ ಪ್ರಶ್ನೆಯಿಲ್ಲ. ಭವಿಷ್ಯದಲ್ಲಿಯೂ ನಿಮ್ಮ ಜೊತೆ ನಾವಿರುತ್ತೇವೆ. ಯೋಗೇಶ್ವರ್ ಅವರ ಜೊತೆಯೂ ಇರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣಕ್ಕೆ 500 ಕೋಟಿ ಅನುದಾನ ನೀಡಿದ್ದೇವೆ

“ಚನ್ನಪಟ್ಟಣಕ್ಕೆ ಹೊಸರೂಪವನ್ನು ನೀಡುವುದಕ್ಕೆ ನಾವು ಬದ್ಧವಾಗಿದ್ದೇವೆ. ಕರ್ನಾಟಕದ ಅಭಿವೃದ್ದಿಯೇ ನಮ್ಮ ಸಂಕಲ್ಪ. ಈ ಗುರಿಯನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಚನ್ನಪಟ್ಟಣದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಸುಮಾರು 500 ಕೋಟಿ ಅನುದಾನ ನೀಡಲಾಗಿದೆ. ಜಾತ್ಯಾತೀತ ಎನ್ನುವ ಹೆಸರನ್ನು ಇಟ್ಟುಕೊಂಡಿರುವ ಜನತಾದಳ ಕೋಮುವಾದಿ ಬಿಜೆಪಿ ಜೊತೆ ಏಕೆ ಮೈತ್ರಿ ಮಾಡಿಕೊಂಡಿತು. ದಳದವರು ಅನುಕೂಲದ ರಾಜಕಾರಣಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಭಾವನನ್ನೇ ಬಿಜೆಪಿಯಿಂದ ಕಣಕ್ಕೆ ಇಳಿಸಿದರು” ಎಂದು ಕಿಡಿಕಾರಿದರು.

ಮೆರವಣಿಗೆಯಲ್ಲಿ ಸಚಿವರಾದ ಬೈರತಿ ಸುರೇಶ್, ಎಂ.ಸಿ.ಸುಧಾಕರ್, ಮಾಜಿ ಸಚಿವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಮಾಜಿ ಸಂಸದರಾದ ಡಿ.ಕೆ.ಸುರೇಶ್ ಸೇರಿ ಹತ್ತಕ್ಕೂ ಹೆಚ್ಚು ಮಂದಿ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments