Homeದೇಶದೇಶದ ಮುಂದೆ ಕ್ಷಮೆಯಾಚಿಸಿ, ಸಚಿವ ಸ್ಥಾನಕ್ಕೆ ಅಮಿತ್‌ ಶಾ ರಾಜೀನಾಮೆ ನೀಡಲಿ: ಮಹದೇವಪ್ಪ

ದೇಶದ ಮುಂದೆ ಕ್ಷಮೆಯಾಚಿಸಿ, ಸಚಿವ ಸ್ಥಾನಕ್ಕೆ ಅಮಿತ್‌ ಶಾ ರಾಜೀನಾಮೆ ನೀಡಲಿ: ಮಹದೇವಪ್ಪ

ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದು ಅಸೂಕ್ಷ್ಮವಾದ ಹೇಳಿಕೆ ಎಂದು ಸಚಿವ ಡಾ. ಎ‌ಚ್‌ ಸಿ ಮಹದೇವಪ್ಪ ಖಂಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಭಾರತದ ಇತಿಹಾಸದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರೂ ಕೂಡಾ ರಕ್ಷಣೆ ಮಾಡಿದ ಉದಾಹರಣೆ ಇಲ್ಲ” ಎಂದಿದ್ದಾರೆ.

“ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ಮಹಾಲೋಕದೃಷ್ಟಿಯ ಮೂಲಕ ಪ್ರತಿದಿನವೂ ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ಮತ್ತವರ ಸಂವಿಧಾನ ಎಂಬುದನ್ನು ನಾನು ಎದೆ ಮುಟ್ಟಿಕೊಂಡು ಹೇಳುತ್ತೇನೆ. ಭಾರತದ ಸಂದರ್ಭದಲ್ಲಿ ಅಸ್ಪೃಶ್ಯತೆ ಅನುಭವಿಸಿದ ನಮ್ಮ ಜನರು, ಇಲ್ಲಿನ ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್ ಅವರನ್ನು ಬಿಟ್ಟು ಅಮಿತ್ ಶಾ ಅವರ ದೇವರ ಹೆಸರನ್ನು ಹೇಳುತ್ತಾ ಕೂತಿದ್ದರೆ ಇಷ್ಟೊತ್ತಿಗೆ ಅವರೆಲ್ಲರೂ ದೇವರ ಪಾದ ಸೇರಬೇಕಾಗಿತ್ತು” ಎಂದು ಹೇಳಿದ್ದಾರೆ.

“ಪುಣ್ಯ ಗಿಣ್ಯ ಎಂದು ಹೇಳುತ್ತಾ ಸಮಾಜಕ್ಕೆ ಕಂಟಕಪ್ರಾಯವಾದ ಮೌಢ್ಯತೆಯನ್ನು ಆಚರಿಸುವುದಕ್ಕಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೀನ ಧೈರ್ಯ ತೋರುತ್ತಿರುವ ಅಮಿತ್ ಷಾ ಅವರು ದೇಶದ ಮುಂದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ” ಎಂದು ಆಗ್ರಹಿಸಿದ್ದಾರೆ.

“ಯಾವ ಧರ್ಮ ಅಥವಾ ದೇವರು ನಮ್ಮನ್ನು ರಕ್ಷಣೆ ಮಾಡುವುದಿಲ್ಲ, ಬದಲಿಗೆ ಶಿಕ್ಷಣ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವೇ ನಮ್ಮ ಬದುಕನ್ನು ಬದಲಿಸುವ ಕೀಲಿಕೈ” ಎಂಬ ಬಾಬಾ ಸಾಹೇಬರ ಮಾತನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments