ಕರ್ನಾಟಕ ಗಡಿ ಮತ್ತು ನದಿಗಳ ವಿವಾದ ವಿಷಯಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲು ಉಸ್ತುವಾರಿಯನ್ನಾಗಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರನ್ನು ನೇಮಿಸಲಾಗಿದೆ.
ಕರ್ನಾಟಕ ಗಡಿ ಮತ್ತು ನದಿಗಳ ವಿವಾದ ವಿಷಯಗಳ ಕುರಿತು ಕಾನೂನಾತ್ಮಕವಾಗಿ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಪರಿಶೀಲಿಸಿ ಸಮಯೋಚಿತ ಅವಶ್ಯಕ ಕ್ರಮ ತೆಗೆದುಕೊಳ್ಳಲು ಸಚಿವರೊಬ್ಬರಿಗೆ ಜವಾಬ್ದಾರಿ ವಹಿಸಲು ಸರ್ಕಾರ ನಿರ್ಧರಿಸಿತ್ತು. ಹೀಗಾಗಿ ಗಡಿ ಉಸ್ತುವಾರಿ ನೋಡಿಕೊಳ್ಳಲು ಹೆಚ್ ಕೆ ಪಾಟೀಲ್ ಅವರನ್ನು ಸರ್ಕಾರ ನೇಮಿಸಿದೆ.
ಕರ್ನಾಟಕ ಸರ್ಕಾರವು 63 ತಾಲ್ಲೂಕುಗಳನ್ನು ಗಡಿ ಭಾಗದ ತಾಲ್ಲೂಕುಗಳೆಂದು ಗುರುತಿಸಿದೆ. ಇವು ಸುಮಾರು 19 ಗಡಿ ಜಿಲ್ಲೆಗಳ ವ್ಯಾಪ್ತಿಗೆ ಬರುತ್ತವೆ. ಜೊತೆಗೆ ಆರು ನೆರೆ ರಾಜ್ಯಗಳಲ್ಲಿನ ಕರ್ನಾಟಕದ ಗಡಿ ಭಾಗದ ಪ್ರದೇಶದಲ್ಲಿರುವ ಕನ್ನಡಿಗರಿಗೂ ಹಲವಾರು ಸಮಸ್ಯೆಗಳಿವೆ. ಇವರ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಸರ್ಕಾರವು 2010ರಲ್ಲಿ ʻಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರʼ ವನ್ನು ಸ್ಥಾಪಿಸಿ ಅದನ್ನು ಈಗ ಯೋಜನಾ ಆಯೋಗದ ಅಡಿಗೆ ತಂದಿದೆ.
ರಾಜ್ಯದ ಹಾಗೂ ಹೊರರಾಜ್ಯದ ಕನ್ನಡ ಪರ ಸಂಘ/ಸಂಸ್ಥೆಗಳಿಗೆ ಭಾಷಾ ಚಟುವಟಿಕೆಗಳಿಗಾಗಿ ಪ್ರೋತ್ಸಾಹ ನೀಡುವುದು ಹಾಗೂ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಮೂಲ ಸೌಕರ್ಯಗಳಾದ ಶಾಲಾ ಕೊಠಡಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಶಾಲಾ ಶೌಚಾಲಯ, ಶಾಲಾ ಆವರಣ ಗೋಡೆ, ಇತ್ಯಾದಿ ಸೌಲಭ್ಯಗಳನ್ನು ಪ್ರಾಧಿಕಾರದಿಂದ ಒದಗಿಸಲಾಗುತ್ತಿದೆ. ಇದೀಗ ಗಡಿಯಲ್ಲಿ ಕನ್ನಡಿಗರ ಸಮಸ್ಯೆ ಪರಿಹರಿಸುವ ಜವಾಬ್ದಾರಿ ಹಿರಿಯ ಸಚಿವರಿಗೆ ಸರ್ಕಾರ ವಹಿಸಿದೆ.