Homeಕರ್ನಾಟಕಪುನೀತ್‌ ರಾಜಕುಮಾರ್‌ ಹೃದಯಜ್ಯೋತಿ ಯೋಜನೆಗೆ ಚಾಲನೆ

ಪುನೀತ್‌ ರಾಜಕುಮಾರ್‌ ಹೃದಯಜ್ಯೋತಿ ಯೋಜನೆಗೆ ಚಾಲನೆ

ಹಠಾತ್‌ ಹೃದಯಾಘಾತವಾದಾಗ ತುರ್ತಾಗಿ ಚಿಕಿತ್ಸೆ ನೀಡುವ ಸಲುವಾಗಿ ‘ಕರ್ನಾಟಕ ರತ್ನ ಡಾ.ಪುನೀತ್‌ ರಾಜಕುಮಾರ್‌ ಹೃದಯಜ್ಯೋತಿ ಯೋಜನೆ’ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಆರೋಗ್ಯ ಇಲಾಖೆ ವತಿಯಿಂದ ಧಾರವಾಡದ ಸತ್ತೂರಿನ ಡಾ.ಡಿ.ವೀರೇಂದ್ರ ಹಗ್ಗಡೆ ಕಲಾ ಕ್ಷೇತ್ರ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ರತ್ನ ಡಾ.ಪುನೀತ್‌ ರಾಜಕುಮಾರ್‌ ಹೃದಯಜ್ಯೋತಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

“ಹೃದಯಾಘಾತ ಸಂಭವಿಸಿದಾಗ ಸಮುದಾಯ, ತಾಲ್ಲೂಕು ಆಸ್ಪತ್ರೆಗಳಲ್ಲಿ ಇಸಿಜಿ ಮಾಡಿ ತಕ್ಷಣವೇ ಕೃತಕ ಬುದ್ಧಿಮತೆ (ಎಐ) ಮೂಲಕ ಆಘಾತದ ತೀವ್ರತೆ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಿಟ್‌ಗಳನ್ನು ಒದಗಿಸಲಾಗಿದೆ” ಎಂದರು.

“ಆಸ್ಪತ್ರೆಯ ವೈದ್ಯರು ತಜ್ಞರನ್ನು ಫೋನ್‌ನಲ್ಲಿ ಸಂಪರ್ಕಿಸಿ ತಂತ್ರಾಂಶ ಮೂಲಕ ಆಘಾತ ಪ್ರಮಾಣ ಪತ್ತೆ ಹಚ್ಚುತ್ತಾರೆ. ಆರು ನಿಮಿಷದಲ್ಲಿ ಈ ಪ್ರಕ್ರಿಯೆ ನಡೆಸುತ್ತಾರೆ. ಆಘಾತ ತೀವ್ರ ಪ್ರಮಾಣದಲ್ಲಿ ಆಗಿದ್ದರೆ ತಜ್ಞರ ಸಲಹೆ ಪಡೆದು ವೈದ್ಯರು ತಕ್ಷಣವೇ ‘ಟೆನೆಕ್ಟ್‌ಪಾಲ್ಸ್‌’ ಚುಚ್ಚುಮದ್ದು ನೀಡುತ್ತಾರೆ. ಹೃದಯದಲ್ಲಿ ‘ಬ್ಲಾಕ್‌’ ಆಗುವುದನ್ನು ಚುಚ್ಚುಮದ್ದು ತಡೆಯುತ್ತದೆ” ಎಂದು ಹೇಳಿದರು.

“ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು. ಪುನೀತ್‌ ರಾಜಕುಮಾರ್‌ ಅವರು ನಟ ಮಾತ್ರವಲ್ಲ ಮನುಷ್ಯತ್ವಕ್ಕೆ ಹೆಸರಾದವರು. ಯೋಜನೆಯನ್ನು ಅರ್ಥಪೂರ್ಣವಾಗಿಸಲು ಇದಕ್ಕೆ ಅವರ ಹೆಸರು ನಾಮಕರಣ ಮಾಡಲಾಗಿದೆ” ಎಂದು ತಿಳಿಸಿದರು.

“ಹೃದಯಾಘಾತವಾದಾಗ ಸುವರ್ಣ ಅವಧಿಯಲ್ಲಿ (ಗೋಲ್ಡನ್‌ ಹವರ್‌) ಚಿಕಿತ್ಸೆ ನೀಡಿ ಜೀವ ಉಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. 15 ಜಿಲ್ಲೆಗಳ 71 ತಾಲ್ಲೂಕು ಆಸ್ಪತ್ರೆಗಳಿಗೆ ಈ ಯೋಜನೆ ಲಿಂಕ್‌ ಮಾಡಲಾಗಿದೆ. ಈ 71 ಆಸ್ಪತ್ರೆಗಳಿಗೆ ಚುಚ್ಚುಮದ್ದುಗಳನ್ನು ಆಸ್ಪತ್ರೆಗೆ ಪೂರೈಸಲಾಗಿದೆ” ಎಂದು ವಿವರಿಸಿದರು.

“ಜನದಟ್ಟಣೆಯ ಸಾರ್ವಜನಿಕ ಸ್ಥಳಗಳಲ್ಲಿ (ಬಸ್‌, ರೈಲು, ವಿಮಾನ ನಿಲ್ದಾಣ, ಕೋರ್ಟ್‌…) ಸ್ವಯಂ ಚಾಲಿತ ಡಿಫಿಬ್ರಿಲೇಟರ್‌ (ಎಇಡಿ) ಸಾಧನಗಳನ್ನು ಅಳವಡಿಸಲು ಸಿದ್ಧತೆ ನಡೆದಿದೆ. ಹೃದಯ ಸ್ತಂಭನ ಆದಾಗ ಶಾಖ ನೀಡಿ ಹೃದಯ ಮತ್ತೆ ಕೆಲಸ ನಿರ್ವಹಿಸುವಂತೆ ಮಾಡಲು ಬಳಸುವ ಸಾಧನ ಇದು” ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌.ಲಾಡ್‌, ಶಾಸಕ ಎನ್‌.ಎಚ್‌.ಕೋನರೆಡ್ಡಿ, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments