Homeಕರ್ನಾಟಕಜಮೀನು ಸರ್ವೆ ಸೇಡಿನ ರಾಜಕೀಯದ ಭಾಗ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪ

ಜಮೀನು ಸರ್ವೆ ಸೇಡಿನ ರಾಜಕೀಯದ ಭಾಗ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪ

ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ತಮ್ಮ ಜಮೀನು ಸರ್ವೆ ಸೇಡಿನ ರಾಜಕೀಯದ ಭಾಗ. ಇಷ್ಟು ದಿನ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡುತ್ತಿದ್ದರು. ಈಗ ಐಎಎಸ್ ಅಧಿಕಾರಿಗಳ ಎಸ್‌ಐಟಿ ರಚನೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೂರಿದರು.

ಬೆಂಗಳೂರಿನಲ್ಲಿ ಬುಧವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, “ಭೂಮಿಯನ್ನು ನಾನು ಖರೀದಿಸಿ 40 ವರ್ಷವಾಗಿದೆ. ಅಷ್ಟೂ ವರ್ಷಗಳಿಂದ ವಿಷಯ ಜೀವಂತವಾಗಿಟ್ಟು ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. 1984ರಲ್ಲಿ ನಾನು ಈ ಭೂಮಿಯನ್ನು ಖರೀದಿ ಮಾಡಿದ್ದು. ಸಿನಿಮಾ ಹಂಚಿಕೆದಾರನಾಗಿ ದುಡಿದ ಹಣದಲ್ಲಿ ಭೂಮಿಯನ್ನು ಖರೀದಿ ಮಾಡಿದ್ದೇನೆ. ಅಂದಿನಿಂದಲೂ ಈ ಭೂಮಿಯ ಮೇಲೆ ಕೆಲವರ ಕಣ್ಣು ಬಿದ್ದಿದೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದ ಅಸಹಾಯಕತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವೆ ಮೂಲಕ ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.

“1986ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರ ಅವರುಗಳು ಇದೇ ಜಮೀನು ವಿಷಯದಲ್ಲಿ ಆಗಿನ ಪ್ರಧಾನಮಂತ್ರಿ, ಗೃಹ ಮಂತ್ರಿಯವರಿಗೆ ಪತ್ರ ಬರೆದಿದ್ದರು. ತಮ್ಮ ದೂರಿನಲ್ಲಿ ಅವರು ಕುಮಾರಸ್ವಾಮಿ ಅವರು ಜಮೀನು ಖರೀದಿಸಿದ್ದಾರೆ ಎಂದು ಹೇಳಿದ್ದಾರೆ ಹೊರತು ಕಬಳಿಸಿದ್ದಾರೆ ಎಂದು ಆರೋಪ ಮಾಡಿರಲಿಲ್ಲ. ನಾನು ಖರೀದಿ ಮಾಡಿರುವ ಆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆಯೇ ಹೊರತು ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸಿಲ್ಲ. ನನ್ನ ಬಳಿ ಎಲ್ಲ ದಾಖಲೆ ಇದೆ” ಎಂದರು.

“ರಾಜ್ಯದ ಸಂಪತ್ತನ್ನು ರಕ್ಷಿಸುವವನ ರೀತಿ ವರ್ತಿಸುವ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಎನ್ನುವ ವ್ಯಕ್ತಿ ನನ್ನ ಜಮೀನು ವಿಷಯದ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ, ರಾಜ್ಯ ಹೈಕೋರ್ಟ್ ನಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ.‌ ಈ ಸರಕಾರ ಕೆಲವರನ್ನು ಕರೆತಂದು ನನ್ನ ಮೇಲೆ ಆರೋಪ ಮಾಡಿಸುವ ಕೆಲಸ ಮಾಡುತ್ತಿದೆ. ಅವರೆಲ್ಲ ಈಗ ಎಲ್ಲಿಂದ ಉದ್ಭವ ಆದರು ಎಂದು ಗೊತ್ತಿಲ್ಲ” ಎಂದು ಹೇಳಿದರು.

ಸಿಎಂ ಅವರು ದೇವೆಗೌಡರ ಬಗ್ಗೆ ಮಾತನಾಡುವ ಮುನ್ನ ಅವರು ತಮ್ಮ ಯೋಗ್ಯತೆ ಅರಿತುಕೊಂಡು ಮಾತನಾಡಲಿ. ರಾಜ್ಯದ ನೀರಾವರಿಗೆ ದೇವೇಗೌಡರು ಏನು ಮಾಡಿದ್ದಾರೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ದೇವೇಗೌಡರು ನೀರಾವರಿ ಬಗ್ಗೆ, ರಾಜ್ಯದ ಜನತೆಯ ರಕ್ಷಣೆ ಮಾಡುವುದಕ್ಕೆ ಇವರಿಂದ ಹೇಳಿಸಿಕೊಳ್ಳಬೇಕಿಲ್ಲ. ಸಿದ್ದರಾಮಯ್ಯ ಅವರೇ, ಈ ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ನಿಮ್ಮ ಕೊಡುಗೆ ಏನು? ನೀರಾವರಿಗೆ ನಿಮ್ಮ ಕೊಡುಗೆ ಏನು” ಎಂದು ಪ್ರಶ್ನಿಸಿದರು.

“ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯಕ್ಕೆ ಅವರ ಕೊಡುಗೆ ಏನು? ದುಡ್ಡು ಹೊಡೆದಿರುವುದೇ ಅವರ ಕೊಡುಗೆ. ಇನ್ನೊಂದು ವಾರ ನೋಡೋಣ‌. ಈ ಸರಕಾರ ಏನೇನು ಮಾಡುತ್ತದೆ ಎಂದು. ಆಮೇಲೆ ಮಾತನಾಡುತ್ತೇನೆ. ರಾಜ್ಯದ ಸಮಸ್ಯೆಗಳ ಬಗ್ಗೆ ಇವರ ಗಮನವೇ ಇಲ್ಲ” ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments