ಗದಗ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಸ್ಥಳ ಲಕ್ಕುಂಡಿ ಗ್ರಾಮದಲ್ಲಿನ ಉತ್ಖನನ ಕಾರ್ಯದಲ್ಲಿ ಕಾರ್ಮಿಕರು ಅಪರೂಪದ ಐತಿಹಾಸಿಕ ಪಾಣಿಪೀಠವನ್ನು ಹೊರತೆಗೆದಿದ್ದಾರೆ. ಪಾಣಿಪೀಠವು ಎರಡು ತುಂಡುಗಳಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದೊರೆತ ಪಾಣಿಪೀಠವನ್ನು ವೈಜ್ಞಾನಿಕವಾಗಿ ಜೋಡಿಸಿ ಮೂಲ ಸ್ವರೂಪಕ್ಕೆ ತರಲು ಯೋಜನೆ ರೂಪಿಸಲಾಗಿದೆ ಎಂದು ಉತ್ಖನನಾಧಿಕಾರಿಗಳು ತಿಳಿಸಿದ್ದಾರೆ. ಪಾಣಿಪೀಠವು ಅರ್ಧಪ್ರದಕ್ಷಿಣೆ ಹಾಕುವ ವಿನ್ಯಾಸದಲ್ಲಿದ್ದು, ಚಾಲುಕ್ಯರ ಕಾಲಘಟ್ಟದ ದೇವಾಲಯ ಶಿಲ್ಪಕಲೆಯ ಮಹತ್ವವನ್ನು ತಿಳಿಸುತ್ತದೆ.
ಶಿಲ್ಪದ ಅಳತೆ, ವಿನ್ಯಾಸ ಮತ್ತು ಕೆತ್ತನೆಯ ಆಧಾರದ ಮೇಲೆ ಇದು ಶೈವ ಪರಂಪರೆಯ ಪೂಜಾ ವ್ಯವಸ್ಥೆಗೆ ಸಂಬಂಧಿಸಿದ್ದು ಎಂದು ಅಂದಾಜಿಸಲಾಗಿದೆ. ಉತ್ಖನನ ಪ್ರದೇಶದಲ್ಲಿ ಮುಂದುವರೆದ ಕಾರ್ಯಾಚರಣೆ ವೇಳೆ ಇನ್ನಷ್ಟು ಅವಶೇಷಗಳು ಸಿಗುವ ನಿರೀಕ್ಷೆಯಿದೆ. ತಜ್ಞರ ಮಾರ್ಗದರ್ಶನದಲ್ಲಿ ಪಾಣಿಪೀಠದ ಸಂರಕ್ಷಣೆ ಮತ್ತು ಪುನರ್‌ಜೋಡಣೆ ಕಾರ್ಯ ಕೈಗೊಳ್ಳಲಾಗುತ್ತಿದೆ.
ಉತ್ಖನನದ ವೇಳೆ ಗ್ರಾಮದಲ್ಲಿ ಅಪರೂಪದ ಪುರಾತನ ದೇವಸ್ಥಾನ ಪತ್ತೆಯಾಗಿದ್ದು, ಗಮನ ಸೆಳೆದಿತ್ತು. ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆಯಂತಿರುವ ಚೌಕಿಮಠ ಮನೆಯ ಸಂಕೀರ್ಣದ ಒಳಭಾಗದಲ್ಲಿ ಚಾಲುಕ್ಯರ ಕಾಲದ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನ ಇದಾಗಿದೆ.
ಚೌಕಿಮಠ ಮನೆತನದ ಆವರಣದಲ್ಲಿ ಸುಮಾರು ಹತ್ತಡಿ ಮಟ್ಟಿಗೆ ಮುಚ್ಚಿಹೋಗಿರುವ ಪುರಾತನ ದೇವಸ್ಥಾನ ಇತಿಹಾಸಕಾರರ ಕುತೂಹಲ ಕೆರಳಿಸಿತ್ತು. ಇದು ಚಾಲುಕ್ಯರ ಕಾಲದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


