ವಿಜಯಪುರ ಮತ್ತು ಇತರೆ ಕೆಲವು ಜಿಲ್ಲೆಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಘೋಷವಾಕ್ಯ ಬದಲಾವಣೆಗೆ ಕಾರಣ ಏನೆಂಬುದು ಗೊತ್ತಿಲ್ಲ. ಏಕೆ ಈ ಬದಲಾವಣೆ ಮಾಡಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
“ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಘೋಷವಾಕ್ಯ ಬದಲಾವಣೆ ಮಾಡಿದ ವಿಚಾರ ರಾಜಕೀಯ ಆಯಾಮ ಪಡೆಯುತ್ತಿದ್ದಂತೆಯೇ ಈ ಬಗ್ಗೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯಿಸಿದರು.
“ನಾವು ಕುವೆಂಪು ಆಶಯದ ರೀತಿಯಲ್ಲೇ ನಡೆದುಕೊಂಡು ಹೋಗುತ್ತೇವೆ. ಕೈ ಮುಗಿಯುವುದು ನಮ್ಮ ಸಂಪ್ರದಾಯ. ಅದು ಭಿಕ್ಷೆ ಬೇಡುವುದು ಅಲ್ಲ ಎಂಬುದು ನನ್ನ ಅಭಿಪ್ರಾಯ. ಏನಾದರೂ ಉದಾಹರಣೆಗಾಗಿ ಆ ರೀತಿ ಮಾಡಿರಬಹುದು” ಎಂದರು.
“ಮಕ್ಕಳ ಹಕ್ಕು ಚ್ಯುತಿಯಾಗಿ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. “ಕೈ ಮುಗಿದು ಒಳಗೆ ಬಂದು ನಿಮ್ಮ ಹಕ್ಕುನ್ನು ಪ್ರತಿಪಾದಿಸಿ’ ಅಂತ ಇದ್ದರೆ ಚನ್ನಾಗಿ ಇರುತ್ತಿತ್ತು. ಬಿಜೆಪಿಯವರು ವಿರೋಧ ಮಾಡಲಿ. ಯಾವುದೇ ಕಾರಣಕ್ಕೂ ಕುವೆಂಪು ಅವರಿಗೆ ನಮ್ಮ ಸರ್ಕಾರ ಅವಮಾನ ಮಾಡಲ್ಲ” ಎಂದು ಸಚಿವರು ತಿಳಿಸಿದರು.
“ಕುವೆಂಪು ಅವರ ಕವಿತೆಯ ಸಾಲುಗಳನ್ನು ತೆಗೆಯದೇ ಇನ್ನಷ್ಟು ಚೆನ್ನಾಗಿ ಘೋಷವಾಕ್ಯ ಮಾಡಬಹುದಿತ್ತು. ಸರಸ್ವತಿ ಹಾಗೂ ಜ್ಞಾನಕ್ಕೆ ಜಾತಿ, ಧರ್ಮ ಇರಲ್ಲ. ಬಿಜೆಪಿ ಅವರು ಹೇಳಿದ್ದಾರೆ ಅಂತ ಬದಲಾವಣೆ ಮಾಡಬೇಕು ಅಂತೇನಿಲ್ಲ. ವೈಯಕ್ತಿಕವಾಗಿ ಇದನ್ನು ಇಟ್ಕೊಂಡು ಹಕ್ಕನ್ನು ಪ್ರತಿಪಾದಿಸು ಅಂತ ಇದ್ದರೆ ಒಳ್ಳೆಯದು. ಅದರಿಂದ ಅಂಬೇಡ್ಕರ್ ಅವರಿಗೂ ಗೌರವ ಕೊಟ್ಟಂತೆ ಆಗುತ್ತದೆ” ಎಂದರು.
ಘೋಷವಾಕ್ಯ ಬದಲಾವಣೆ ಸಮರ್ಥಿಸಿದ ಲಕ್ಷ್ಮೀ ಹೆಬ್ಬಾಳ್ಕರ್
ಕೈ ಮುಗಿದು ಬಾ, ಧೈರ್ಯದಿಂದ ಪ್ರಶ್ನಿಸಿ ಎಂಬುದು ಎರಡೂ ಒಂದೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಮರ್ಥನೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಅವೆರಡೂ ವಾಕ್ಯಗಳು ಒಂದೇ ಅರ್ಥದಲ್ಲಿವೆ. ಅವು ತದ್ವಿರುದ್ಧ ಅಲ್ಲ. ಜ್ಞಾನ ದೇಗುಲಕ್ಕೆ ಜ್ಞಾನ ಪಡೆಯಲು, ಆತ್ಮವೃದ್ಧಿಗೆ ಬನ್ನಿ. ಧೈರ್ಯದಿಂದ ಜೀವನ ಸಾಗಿಸಲು ಬನ್ನಿ ಎಂದು ಹೆಬ್ಬಾಳ್ಕರ್ ಹೇಳಿದರು. ಈ ವಿಚಾರವಾಗಿ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಹೆಚ್ಚು ಮಾತನಾಡಿದರೆ ಪರ, ವಿರೋಧ ಚರ್ಚೆಯಾಗುತ್ತದೆ” ಎಂದು ಅವರು ಹೇಳಿದರು.