ನಿಖಿಲ್ ಅವರಿಗೆ ಚನ್ನಪಟ್ಟಣ ಟಿಕೆಟ್ ಸಿಗುವಂತೆ ಮಾಡಲು ಕುಮಾರಸ್ವಾಮಿ ಅವರು ಚದುರಂಗದಾಟ ಸೃಷ್ಟಿಸಿದರು ಎಂದು ಮಾಜಿ ಸಂಸದ ಡಿ ಕೆ ಸುರೇಶ್ ತಿಳಿಸಿದರು.
ಸದಾಶಿವನಗರದ ನಿವಾಸದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ‘ನಿಖಿಲ್‌ಗೆ ಟಿಕೆಟ್ ನೀಡಬೇಕಾದ ಅನಿವಾರ್ಯತೆಯನ್ನು ಕಾಂಗ್ರೆಸ್ ಸೃಷ್ಟಿ ಮಾಡಿತು ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹಿರಿಯ ರಾಜಕಾರಣಿಯಾದ ಕುಮಾರಸ್ವಾಮಿ ಅವರು ಕಳೆದ 40 ವರ್ಷಗಳಿಂದ ಅವರ ದೃಷ್ಟಿಕೋನದಲ್ಲಿ ತಂತ್ರಗಾರಿಕೆ ಮಾಡಿಕೊಂಡು ಬಂದಿದ್ದಾರೆ. ಇದರ ಮುಂದುವರೆದ ಭಾಗವಿದು. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗುತ್ತಾರೆ ಎನ್ನುವುದು ಚನ್ನಪಟ್ಟಣದ ಎಲ್ಲರಿಗೂ ತಿಳಿದಿದ್ದ ಸತ್ಯ” ಎಂದರು.
“ನಿಖಿಲ್ ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗುತ್ತಾರೆ ಎನ್ನುವ ಸತ್ಯ ಎಲ್ಲರಿಗೂ ತಿಳಿದಿತ್ತು. ಜೆಡಿಎಸ್ ಪಕ್ಷಕ್ಕೆ ಕುಮಾರಸ್ವಾಮಿ ಅವರೇ ಅಧಿನಾಯಕರು. ಎಲ್ಲವೂ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಲವಂತವಾಗಿ ಚುನಾವಣೆಗೆ ನಿಖಿಲ್ ಅವರನ್ನು ನಿಲ್ಲಿಸಲಾಗುತ್ತಿದೆ ಎನ್ನುವುದೆಲ್ಲಾ ಸುಳ್ಳು, ಅವರ ಉದ್ದೇಶ ಈ ಮೂಲಕ ಫಲ ನೀಡಿದೆ” ಎಂದು ಹೇಳಿದರು.
ಕಣ್ಣೀರಿನ ನಾಟಕ ಪ್ರಾರಂಭವಾಗುತ್ತದೆ
ನಾಟಕ ಮಾಡಿ ನಿಖಿಲ್‌ಗೆ ಟಿಕೆಟ್ ಗಳಿಸಿಕೊಂಡರೇ ಎಂದು ಕೇಳಿದಾಗ, “ಅದನ್ನು ಮಾಧ್ಯಮದವರು ಹೇಳಬೇಕು. ನಾಮಪತ್ರ ಸಲ್ಲಿಸಿದ ನಂತರ ನಾಟಕ ಪ್ರಾರಂಭವಾಗುತ್ತದೆ. ಕಣ್ಣೀರು ಬರಬಹುದೇನೋ, ಮಾಧ್ಯಮದವರು ಕಣ್ಣೀರು ಹಾಕಿ ಎಂದರೆ ಹಾಕುತ್ತಾರೆ” ಎಂದು ವ್ಯಂಗ್ಯವಾಗಿ ಉತ್ತರಿಸಿದರು.
ನಿಖಿಲ್ ಪ್ರಬಲ ಅಭ್ಯರ್ಥಿಯಾಗಬಲ್ಲರೇ ಎಂದು ಪ್ರಶ್ನಿಸಿದಾಗ, “ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಚುನಾವಣೆಯಲ್ಲಿ ಒಂದೊಂದು ಮತವೂ ಮುಖ್ಯ ಎಂದು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಯಾರು ಪ್ರಭಾವಿಗಳು ಎನ್ನುವುದಕ್ಕಿಂತ, ನಾವು ಪಕ್ಷವನ್ನು ಗೆಲ್ಲಿಸಲು ಹೋರಾಟ ಮಾಡುತ್ತೇವೆ” ಎಂದರು.
ದೇವೇಗೌಡರು ಇರುವುದೇ ಪ್ರಚಾರಕ್ಕೆ
ಒಂದು ವಾರಗಳ ಕಾಲ ದೇವೇಗೌಡರು ಚನ್ನಪಟ್ಟಣದಲ್ಲಿ ಪ್ರಚಾರ ಮಾಡುವುದುರಿಂದ ಕಾಂಗ್ರೆಸ್ ಗೆಲುವಿಗೆ ತೊಡಕಾಗುವುದಿಲ್ಲವೇ ಎಂದಾಗ, “ದೇವೇಗೌಡರು ಇರುವುದೇ ಪ್ರಚಾರ ಮಾಡುವುದಕ್ಕೆ. ಅವರ ಮೊಮ್ಮಗನ ಪರವಾಗಿ ಪ್ರಚಾರ ಮಾಡಬೇಡಿ ಎಂದು ಹೇಳಲು ಆಗುತ್ತದೆಯೇ? ನಾವು ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ” ಎಂದು ಹೇಳಿದರು.
ನೀವು ಅಭ್ಯರ್ಥಿಯಾಗಿಲ್ಲ ಎನ್ನುವ ಬೇಸರ ಹಾಗೂ ಪಕ್ಷದೊಳಗಿನ ಅಸಮಾಧಾನ ಸರಿಹೋಯಿತೇ ಎಂದು ಕೇಳಿದಾಗ “ಪಕ್ಷದಲ್ಲಿ ಸಣ್ಣ ಬೇಸರವಿದೆ ಹೊರತು ಯಾವುದೇ ಅಸಮಾಧಾನವಿಲ್ಲ. ನಾನು ಮೊದಲಿನಿಂದಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇ, ಮಾಧ್ಯಮದವರೇ ನನ್ನ ಹೀರೋ ಮಾಡುತ್ತಿದ್ದಾರೆ” ಎಂದರು.
ಶಿಗ್ಗಾವಿಯಲ್ಲಿ ಸೋತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಹೊಂದಾಣಿಕೆ ರಾಜಕಾರಣವೇ ಎಂದಾಗ, “ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳನ್ನು ಕೇಳಬೇಕು. ನಮ್ಮಲ್ಲಿ ಯಾವುದೇ ಹೊಂದಾಣಿಕೆಯಿಲ್ಲ. ಸೋತ ಅಭ್ಯರ್ಥಿಗೆ ಟಿಕೆಟ್ ನೀಡಬಾರದು ಎನ್ನುವುದೇನಿಲ್ಲವಲ್ಲ. ನಾಲ್ಕೈದು ಬಾರಿ ಸೋತವರೇ ಮುಖ್ಯಮಂತ್ರಿಗಳಾದ ಉದಾಹರಣೆ ನಮ್ಮ ಮುಂದಿದೆ” ಎಂದು ಹೇಳಿದರು.
ಹೊಣೆ ನಾನೇ ಹೊತ್ತಿದ್ದೇನೆ
ಯೋಗೇಶ್ವರ್ ಅವರಿಗೆ ನೀವೇ ಸಾಥ್ ಕೊಡುತ್ತಿದ್ದೀರಿ ಎಂದಾಗ “ಯಾರಾದರೊಬ್ಬರು ಸಾಥ್ ನೀಡಲೇ ಬೇಕಲ್ಲವೇ? ಚುನಾವಣಾ ಹೊಣೆಯನ್ನು ನಾನೇ ಹೊತ್ತಿದ್ದೇನೆ. ಬೆಂಗಳೂರು ಗ್ರಾಮಾಂತರ ಬಿಟ್ಟ ಕ್ಷಣದಿಂದ ಸಂತೋಷವಾಗಿದ್ದೇನೆ. ಬೇರೆಯವರು ಅವರ ಆಸ್ತಿ ಎಂದು ತಿಳಿದುಕೊಂಡಿರುವಂತೆ, ಕ್ಷೇತ್ರ ನಮ್ಮ ಅಪ್ಪನ ಆಸ್ತಿಯಲ್ಲ. ಕೆಲಸ ಮಾಡಲು ಸಾರ್ವಜನಿಕರು ಕೊಟ್ಟಿರುವ ಕೊಡುಗೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ಬೇಡ ಎಂದು ಹೇಳಿದ್ದಾರೆ, ಅದನ್ನು ಮುಕ್ತ ಕಂಠದಿಂದ ಸ್ವಾಗತ ಮಾಡಿದ್ದೇನೆ” ಎಂದರು.