ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಕಬಳಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
“ನ್ಯಾಯಾಲಯದ ಆದೇಶ ಪಾಲನೆ ಮಾಡದಿದ್ದರೆ ಕಿಂಚಿತ್ತೂ ಕರುಣೆ ತೋರುವುದಿಲ್ಲ. 15 ದಿನ ಜೈಲಲ್ಲಿ ಇದ್ದು ಬಂದರೆ ಸರಿ ಹೋಗುತ್ತೀರಿ” ಎಂದು ಕಠಿಣ ಎಚ್ಚರಿಕೆ ನೀಡಿದೆ.
ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ದೂರಿ ಎಸ್.ಆರ್. ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ನ್ಯಾಯಾಲಯದ ಹಿಂದಿನ ಆದೇಶದಂತೆ ರಾಜೇಂದ್ರ ಕುಮಾರ್ ಕಟಾರಿಯಾ ಬುಧವಾರದ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಪಾಲಿಸುವ ನಿಟ್ಟಿನಲ್ಲಿ ಸರ್ಕಾರ ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಲು ಕಟಾರಿಯಾ ಮುಂದಾದರು. ಅದಕ್ಕೆ ಕೆ. ವಾಸುದೇವನ್ ವರ್ಸಸ್ ಟಿ.ಆರ್. ಧನಂಜಯ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ, ಅದೂ ಸಾರ್ವಜನಿಕ ಕಾಳಜಿಯುಳ್ಳ ಪ್ರಕರಣಗಳಲ್ಲಿ ಸರ್ಕಾರಕ್ಕೆ ಕಿಂಚಿತ್ತೂ ಕರುಣೆ ತೋರಬಾರದು ಎಂದಿದೆ. ಅದನ್ನೇ ಇಲ್ಲಿ ಅನುಸರಿಸಬೇಕಾಗುತ್ತದೆ ಎಂದು ನ್ಯಾ. ಸೋಮಶೇಖರ್ ಕಿಡಿಕಾರಿದರು.
ಅಲ್ಲದೆ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕುಮಾರಸ್ವಾಮಿ ಮತ್ತು ಸಂಬಂಧಿಕರು ತುಂಬಾ ಉನ್ನತ ಹುದ್ದೆಯಲ್ಲಿದ್ದಾರೆ ಎಂದುಕೊಂಡು ನೀವು 5 ವರ್ಷ ಮಾಡಿಲ್ಲ ತಾನೇ? ಇನ್ನೆರಡು ವಾರ ಸಮಯ ಕೊಡುತ್ತೇನೆ. ಅಷ್ಟರೊಳಗೆ ನಿಮ್ಮ ಕೈಯಲ್ಲಿ ಆಗುತ್ತದೆ ಅಂದರೆ ಹೇಳಿ, ಇಲ್ಲ ಅಸಮರ್ಥರಿದ್ದೀವಿ ಅಂತಾದರೂ ಹೇಳಿ, ನಿಮ್ಮನ್ನು ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸುತ್ತೇನೆ.
15 ದಿನ ಜೈಲಲ್ಲಿ ಇದ್ದು ಬಂದರೆ ಸರಿ ಹೋಗುತ್ತೀರಿ. ಎಚ್ಚರವಿರಲಿ ನೀವು ನೆಪ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ವ್ಯವಸ್ಥೆ ನೋಡಿ ಜನ ನಗ್ತಾ ಇದಾರೆ. ನೀವೆಲ್ಲಾ ಕೋರ್ಟ್ ಆದೇಶಗಳನ್ನು ಪಾಲನೆ ಮಾಡುವ ತನಕ ನಿಮ್ಮ ಸಂಬಳ ಕಟ್ ಮಾಡಿದರೆ ಬುದ್ದಿ ಬರುತ್ತೆ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಹೈಕೋರ್ಟ್ ಆದೇಶದ ಅನುಪಾಲನೆಗೆ 3 ತಿಂಗಳಾದರೂ ಕಾಲಾವಕಾಶ ನೀಡಬೇಕು’ ಎಂಬ ಸರ್ಕಾರದ ಪರ ವಕೀಲ ಮನವಿಯನ್ನು ನ್ಯಾಯಪೀಠ ಸಾರಾಸಗಟಾಗಿ ತಳ್ಳಿ ಹಾಕಿತು. ಇನ್ನೆರಡು ವಾರಗಳ ಅವಕಾಶ ನೀಡಲಾಗುವುದು. ಅಷ್ಟರೊಳಗೆ ಒತ್ತುವರಿ ತೆರವುಗೊಳಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.