ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿರುವಂತೆ ದೇವದಾರಿ ಗಣಿಗಾರಿಕೆಗಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ 500 ಕೋಟಿ ರೂ. ಪಾವತಿಸಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದ ಕೆ.ಐ.ಓ.ಸಿ.ಎಲ್. ಪರಿಸರಕ್ಕೆ ಮಾಡಿರುವ ಹಾನಿಯ ಮೊತ್ತ ಸೇರಿದಂತೆ ಇಲಾಖೆಗೆ ಸುಮಾರು 1400 ಕೋಟಿ ರೂಪಾಯಿ ಬಾಕಿ ಪಾವತಿಸಬೇಕು” ಎಂದು ಹೇಳಿದರು.
“ಅಕ್ರಮವಾಗಿ ಲಕ್ಯಾ ಜಲಾಶಯದ ಎತ್ತರ ಹೆಚ್ಚಿಸಿ, ಅರಣ್ಯ ಮುಳುಗಡೆ ಮಾಡಿದ್ದಕ್ಕಾಗಿ 119.12 ಕೋಟಿ, ಗಣಿಗಾರಿಕೆಗಾಗಿ ಹೊಸ ಭೂಮಿ ಅಗೆದಿದ್ದಕ್ಕಾಗಿ 19.88 ಕೋಟಿ ರೂ. ಸೇರಿದಂತೆ 142.96 ಕೋಟಿ ರೂ.ಗಳನ್ನು ಪರೋಕ್ಷ ಮತ್ತು ಪ್ರತ್ಯಕ್ಷ ಪರಿಸರ ಹಾನಿಗಾಗಿ ಕಂಪನಿ ಪಾವತಿಸಬೇಕು. ಇದಲ್ಲದೆ ಮಹಾ ಲೆಕ್ಕಪರಿಶೋಧಕರು ಉಲ್ಲೇಖಿಸಿರುವಂತೆ ನಿವ್ವಳ ಪ್ರಸ್ತುವ ಮೌಲ್ಯ (ಎನ್.ಪಿ.ವಿ.) ಮೊತ್ತ, ಬಡ್ಡಿ ಸೇರಿ 1349.52948 ಕೋಟಿ ರೂ. ಪಾವತಿಸಬೇಕು” ಎಂದು ಈಶ್ವರ ಖಂಡ್ರೆ ವಿವರ ನೀಡಿದರು.
“ಇದರ ಜೊತೆಗೆ ಕೆ.ಐ.ಓ.ಸಿ.ಎಲ್. ತನ್ನ ಸ್ವಂತ ಭೂಮಿ 114.30 ಹೆಕ್ಟೇರ್, ಸರ್ಕಾರದ ಕಂದಾಯ ಭೂಮಿ 1220.03 ಹೆಕ್ಟೇರ್ ಸೇರಿ ಒಟ್ಟು 1334.33 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು. ಈ ಪೈಕಿ 670 ಹೆಕ್ಟೇರ್ ಪ್ರದೇಶವನ್ನು ಅಂಕೋಲ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗುರುತಿಸಲಾಗಿದೆ” ಎಂದು ತಿಳಿಸಿದರು.
“ಕುದುರೇಮುಖ ಕಬ್ಬಿಣದ ಅದಿರು ಕಂಪನಿ ಈ ಹಿಂದೆ ಕುದುರೇಮುಖ ಅರಣ್ಯ ಪ್ರದೇಶದಲ್ಲಿ ನಡೆಸಿದ ಗಣಿಗಾರಿಕೆಯ ವೇಳೆ ಪರಿಸರಕ್ಕೆ ಉಂಟು ಮಾಡಿರುವ ಹಾನಿ ವಿಪರೀತವಾಗಿದೆ. ಈ ಬಗ್ಗೆ ನ್ಯಾಯಾಲಯದ ತೀರ್ಪುಗಳಲ್ಲಿ, ಕೇಂದ್ರ ಉನ್ನತಾಧಿಕಾರ ಸಮಿತಿ (ಸಿ.ಇ.ಸಿ.) ವರದಿಯಲ್ಲಿ ಹಾಗೂ 13ನೇ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ನೀಡಿರುವ 3ನೇ ವರದಿಯಲ್ಲೂ ವಿವರವಾಗಿ ತಿಳಿಸಲಾಗಿದೆ” ಎಂದು ಹೇಳಿದರು.
“ಕಂಪನಿ ಗಣಿ ಉತ್ಖನನ ಆರಂಭಿಸಿದ ವೇಳೆ ಶೇ.27ರಷ್ಟು ಮಣ್ಣನ್ನು ಲಕ್ಯಾ ಡ್ಯಾಂಗೆ ಸುರಿದಿದ್ದು ಪ್ರಸ್ತುತ ಅಲ್ಲಿ 150 ಮಿಲಿಯನ್ ಟನ್ ಮಣ್ಣು ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಮಣ್ಣು ಹಾಕಲು ಅನಧಿಕೃತವಾಗಿ ಕಂಪನಿ ಲಕ್ಯಾ ಡ್ಯಾಂ ಎತ್ತರವನ್ನು ಹೆಚ್ಚಿಸಿತ್ತು. ಇದರಿಂದ 340 ಹೆಕ್ಟೇರ್ ಅರಣ್ಯ ಭೂಮಿಗೆ ಹಾನಿಯಾಗಿದೆ” ಎಂದರು.