Homeಕರ್ನಾಟಕಕೆಎಸ್‌ಡಿಎಲ್ | ಮೇ ತಿಂಗಳಲ್ಲಿ ₹186 ಕೋಟಿ ವಹಿವಾಟು, ಸಾರ್ವಕಾಲಿಕ ದಾಖಲೆ: ಎಂ ಬಿ ಪಾಟೀಲ

ಕೆಎಸ್‌ಡಿಎಲ್ | ಮೇ ತಿಂಗಳಲ್ಲಿ ₹186 ಕೋಟಿ ವಹಿವಾಟು, ಸಾರ್ವಕಾಲಿಕ ದಾಖಲೆ: ಎಂ ಬಿ ಪಾಟೀಲ

ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್‌ಡಿಎಲ್) ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. ಉದ್ಯಮದ 108 ವರ್ಷಗಳ ಇತಿಹಾಸದಲ್ಲೇ ಕೇವಲ ಒಂದು ತಿಂಗಳಲ್ಲಿ ಹೀಗೆ ಭಾರೀ ವಹಿವಾಟು ನಡೆಸಿರುವುದು ಇದೇ ಪ್ರಪ್ರಥಮ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಸಂಸ್ಥೆಗೆ ಮೇ ತಿಂಗಳಲ್ಲಿ 151.50 ಕೋಟಿ ರೂ. ವಹಿವಾಟಿನ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಈಗ ಇದಕ್ಕಿಂತ ₹35 ಕೋಟಿ ಹೆಚ್ಚಿನ ವಹಿವಾಟು ನಡೆಸುವ ಮೂಲಕ ಶೇಕಡ 125ರಷ್ಟು ಸಾಧನೆ ಮತ್ತು ಶೇಕಡ 15ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಈ ವಹಿವಾಟಿನ ಪೈಕಿ ರಫ್ತಿನ ಮೂಲಕ 1.81 ಕೋಟಿ ರೂ. ಗಳಿಸಲಾಗಿದೆ. ರಫ್ತು ವಹಿವಾಟನ್ನು ವಾರ್ಷಿಕವಾಗಿ 150 ಕೋಟಿ ರೂ.ಗೆ ಕೊಂಡೊಯ್ಯುವ ಗುರಿ ಇದೆ ಎಂದಿದ್ದಾರೆ.

ಸಂಸ್ಥೆಯು ತಯಾರಿಸುವ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಎಲ್ಲಾ 45 ಬಗೆಯ ಉತ್ಪನ್ನಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬಯಿ, ಕೋಲ್ಕತ್ತ, ನವದೆಹಲಿ ಶಾಖೆಗಳಲ್ಲಿ ಮತ್ತು ಬೆಂಗಳೂರಿನ ನೇರ ಮಾರುಕಟ್ಟೆ ವಿಭಾಗದ ಮೂಲಕ ನಿರೀಕ್ಷೆಗೂ ಮೀರಿ ಮಾರಾಟವಾಗಿವೆ. ಕೆಎಸ್ಡಿಎಲ್ ಉತ್ಪನ್ನಗಳಾದ ಸಾಬೂನು, ಶವರ್ ಜೆಲ್, ಅಗರಬತ್ತಿ ಮುಂತಾದವುಗಳಿಗೆ ವ್ಯಾಪಕ ಬೇಡಿಕೆ ಬರುತ್ತಿದೆ. ಸಂಸ್ಥೆಯಲ್ಲಿ ಗುಣಮಟ್ಟದ ಉತ್ಪಾದನೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡಿರುವ ಪ್ರಯತ್ನಗಳು ಫಲ ಕೊಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೇ ಅತಿ ಹೆಚ್ಚು ಅಂದದೆ ₹85 ಕೋಟಿ ವಹಿವಾಟು ನಡೆದಿದೆ. ಉಳಿದ ₹100 ಕೋಟಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಆಗಿದೆ ಎಂದು ಅವರು ಅಂಕಿಅಂಶ ನೀಡಿದ್ದಾರೆ.

ಈ ಹಿಂದೆ 2024ರ ಸೆಪ್ಟೆಂಬರ್ ತಿಂಗಳೊಂದರಲ್ಲೇ 178 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಇದನ್ನು ದಾಟಲಾಗಿದೆ. ಸಾಮಾನ್ಯವಾಗಿ ಕೆಎಸ್ಡಿಎಲ್ ಪ್ರತೀ ತಿಂಗಳೂ ಸರಾಸರಿ ₹135 ಕೋಟಿಗಳಿಂದ ₹140 ಕೋಟಿವರೆಗೂ ವಹಿವಾಟು ನಡೆಸುತ್ತದೆ. ಆದರೆ, ಮೇ ತಿಂಗಳಲ್ಲಿ ಇದಕ್ಕಿಂತ ₹41 ಕೋಟಿ ಹೆಚ್ಚು ವಹಿವಾಟು ದಾಖಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಯ ಕಾರ್ಯವಿಧಾನವನ್ನು ಹೆಚ್ಚು ದಕ್ಷಗೊಳಿಸಲಾಗಿದೆಯೇ ವಿನಾ ಯಾವ ಹೊಸ ಉಪಕರಣಗಳನ್ನೂ ಖರೀದಿಸಿಲ್ಲ. ಸದ್ಯದಲ್ಲೇ ಸಂಸ್ಥೆಯ ವತಿಯಿಂದ ಸುಗಂಧದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕೆಎಸ್ ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments