Homeಕರ್ನಾಟಕಕೃಷ್ಣ ಮೇಲ್ದಂಡೆ 3ನೇ ಹಂತ | ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹಾಕಿ: ಡಿ...

ಕೃಷ್ಣ ಮೇಲ್ದಂಡೆ 3ನೇ ಹಂತ | ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹಾಕಿ: ಡಿ ಕೆ ಶಿವಕುಮಾರ್‌

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಅನುಷ್ಠಾನಕ್ಕೆ ಬಜೆಟ್ ಅಲ್ಲಿ ನಮ್ಮ ಸರ್ಕಾರ ಬದ್ದತೆ ತೋರಿಸಿದೆ. ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇನೆ. ಬಿಜೆಪಿಯ ಸದಸ್ಯರು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆಗೆ ಅಧಿಸೂಚನೆ ಹೊರಡಿಸಿದರೆ ಎಲ್ಲರೂ ಸೇರಿ ಯೋಜನೆ ಪೂರ್ಣಗೊಳಿಸಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಪ್ರಶ್ನೋತ್ತರ ಕಲಾಪದ ವೇಳೆ ವಿಧಾನಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ್ ಮತ್ತು ಹನುಮಂತ ನಿರಾಣಿ ಅವರು, ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಅನುಷ್ಠಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರಿಸಿದರು.

“519.60 ಮೀ ಇಂದ 524.26 ಮೀ ವರೆಗೆ ಆಲಮಟ್ಟಿ ಜಲಾಶಯವನ್ನು ಎತ್ತರಿಸಬೇಕು ಎಂಬುದು ಸರ್ಕಾರದ ಮುಂದಿದೆ. ಅಣೆಕಟ್ಟನ್ನು ಎತ್ತರ ಮಾಡಿದರೆ ಸುಮಾರು 1 ಲಕ್ಷದ 36 ಸಾವಿರ ಎಕರೆ ಮುಳುಗಡೆಯಾಗುತ್ತದೆ. ಸಂತ್ರಸ್ತರು ಮುಳುಗಡೆ ಪರಿಹಾರವನ್ನು ಈಗಲೇ ನೀಡಿ ಎಂದು ಕೇಳುತ್ತಿದ್ದಾರೆ. ನನಗೆ ಈ ಬಗ್ಗೆ ಬೇರೆ ಅಭಿಪ್ರಾಯವಿತ್ತು. ಆದರೆ ಮುಖ್ಯಮಂತ್ರಿಗಳು ಸಭೆ ನಡೆಸಿ ಬೇರೆಯದೆ ತೀರ್ಮಾನ ಮಾಡಿದರು. ಕೇಂದ್ರ ಸರ್ಕಾರವೂ ಎರಡು ಹಂತದಲ್ಲಿ ಈ ಕಾಮಗಾರಿ ನಡೆಸಬೇಕು ಎಂದು ತಿಳಿಸಿತು. ಆದ ಕಾರಣಕ್ಕೆ ಈ ವಿಚಾರವನ್ನು ಕೇಂದ್ರದವರು ಸಹ ಈವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದೇ ಬಾರಿಗೆ ಆಗುವುದಿಲ್ಲ, ಹಂತ, ಹಂತವಾಗಿ ಯೋಜನೆ ಪೂರ್ಣಗೊಳಿಸಲಾಗುವುದು” ಎಂದರು.

“ಈ ವಿಚಾರವನ್ನು ಸಚಿವ ಸಂಪುಟಸಭೆಯಲ್ಲಿ ತೆಗೆದುಕೊಂಡು ಚರ್ಚೆ ಮಾಡಲಾಗುವುದು. ದೆಹಲಿಯವರ ಬಳಿಯೂ ಆದಷ್ಟು ಬೇಗ ಈ ಯೋಜನೆಗೆ ಅಧಿಸೂಚನೆ ಹೊರಡಿಸಲು ಒತ್ತಡ ಹಾಕಿ ಎಂದು ಮನವಿ ಮಾಡುತ್ತಿದ್ದೇವೆ. ಈ ಯೋಜನೆಗೆ ಅಧಿಸೂಚನೆ ಹೊರಡಿಸಿದರೆ ಆಗ ಸರ್ಕಾರ ಈ ಯೋಜನೆ ಜಾರಿಗೆ ಸಂಪನ್ಮೂಲ ಹುಡುಕಿ ಯೋಜನೆ ಪೂರ್ಣಗೊಳಿಸಬಹುದು” ಎಂದು ಹೇಳಿದರು.

“ಪುನರ್ವಸತಿಗೆ 6 ಸಾವಿರ ಎಕರೆಯಲ್ಲಿ 3,400 ಎಕರೆ ಅಂದರೆ ಶೇ.53 ರಷ್ಟು ಸೌಲಭ್ಯ ನೀಡಲಾಗಿದೆ. ಕಾಲುವೆ ನಿರ್ಮಾಣಕ್ಕೆ 51 ಸಾವಿರ ಎಕರೆ ಜಮೀನು ಬೇಕು, ಇಲ್ಲಿವರೆಗೆ 22 ಸಾವಿರ ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸಬ್ ಮರ್ಜ್ಗಾಗಿ 75 ಸಾವಿರ ಎಕರೆಯಲ್ಲಿ 2,504 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ” ಎಂದು ವಿವರಣೆ ನೀಡಿದರು.

ನೀರಾವರಿ ಇಲಾಖೆ ದುಡ್ಡು ಇತರೇ ಕೆಲಸಗಳಿಗೆ ಬಳಕೆಯಾಗದಂತೆ ತೀರ್ಮಾನ

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯರಾದ ತಿಪ್ಪಣ್ಣ ಕಮಕನೂರ ಅವರು ಬೆಣ್ಣೆತೊರೆ ಜಲಾಶಯದಿಂದ ಮಲ್ಲಯ್ಯ ಮುತ್ತಯ್ಯ ಹಾಗೂ ಸುತ್ತಲಿನ ಕೆರೆಗಳನ್ನು ತುಂಬಿಸುವ ವಿಚಾರವಾಗಿ ಪ್ರಶ್ನೆ ಕೇಳಿದರು. ಉದ್ಭವ ಲಿಂಗವಾದ ಮಲ್ಲಯ್ಯ ಮುತ್ತಯ್ಯನ ದೇವಸ್ಥಾನಕ್ಕೆ ದೈವ ಭಕ್ತರಾದ ಡಿಸಿಎಂ ಅವರು ಬೇಟಿ ನೀಡಿ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

“ಈಗಾಗಲೇ ಇಲಾಖೆಯಲ್ಲಿ ರೂ. 1.20 ಲಕ್ಷ ಕೋಟಿಯಷ್ಟು ಕಾಮಗಾರಿ ನಡೆಯುತ್ತಿದ್ದು, ಇಲಾಖೆಯಲ್ಲಿ ಇರುವುದು 16 ಸಾವಿರ ಕೋಟಿ ಹಣ ಮಾತ್ರ. ಸಣ್ಣ ನೀರಾವರಿ ಇಲಾಖೆಗೆ 2-3 ಸಾವಿರ ಕೋಟಿ ಮಾತ್ರ ಹಣವಿದೆ. ಇದರಲ್ಲಿ ಭೂ ಸ್ವಾಧೀನ, ಹಳೆಸಾಲ ಎಲ್ಲಾ ನೋಡಿದರೆ 5-6 ಸಾವಿರ ಕೋಟಿ ಯೋಜನೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ. ಆದ್ಯತೆಯ ಆಧಾರದ ಮೇಲೆ ಈ ಕೆಲಸವನ್ನು ಮಾಡಲಾಗುವುದು. ರೂ. 64 ಕೋಟಿಯ ಹೊಸ ಪ್ರಸ್ತಾವನೆಯನ್ನು ನೀಡಿದ್ದಾರೆ ಇದರ ಬಗ್ಗೆ ಪರಿಶೀಲನೆ ಮಾಡಲಾಗುವುದು.” ಎಂದು ಹೇಳಿದರು.

ಮುಂದಿನ 15 ದಿನಗಳಲ್ಲಿ ಪರಿಹಾರ ವಿತರಣೆ

ಎಂ.ಜಿ.ಮುಳೆ ಅವರು ಬೆಳಗಾವಿ ಜಿಲ್ಲೆ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದಲ್ಲಿ ಭೂಸ್ವಾಧೀನವಾಗಿದ್ದರೂ ಪರಿಹಾರ ಸಿಕ್ಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, “ಮಂಗಸೂಳಿ ಗ್ರಾಮದಲ್ಲಿ ಕಾಲುವೆ ನಿರ್ಮಾಣದ ವೇಳೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಮುಂದಿನ ಹದಿನೈದು ದಿನದ ಒಳಗಾಗಿ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಭರವಸೆ ನೀಡಿದರು.

“2011 ರಿಂದ ಈ ಭಾಗದ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದ 7,241 ಹೆಕ್ಟೇರ್ ಜಮೀನಿಗೆ ಉಪಯೋಗವಾಗುತ್ತಿದೆ. 136 ಎಕರೆ ಪ್ರದೇಶದಲ್ಲಿ ಜಾಕ್ ವೆಲ್ ಪಂಪ್ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. 134 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಅಂತಿಮಗೊಳಿಸಿದೆ. ಇದಕ್ಕೆ ರೂ. 6,665 ಸಾವಿರ ಕೋಟಿ ಅನುದಾನ ಅವಶ್ಯಕತೆಯಿದೆ. ನಿಗಮದಿಂದಲೂ ಈ ಹಣ ಲಭ್ಯವಿದೆ. 6 ಪ್ರಕರಣಗಳಲ್ಲಿ ಹೈ ಕೋರ್ಟ್ ತೀರ್ಪಿನಂತೆ ಕ್ರಮ ತೆಗೆದುಕೊಳ್ಳಲಾಗುವುದು. ಈಗ 37 (2) ರಅಡಿಯಲ್ಲಿ ನೊಟೀಸ್ ಸ್ವೀಕರಿಸಿ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.

ನೀರು ಬಳಕೆದಾರರ ಸಂಘಗಳಿಗೆ ರೂ.2 ಲಕ್ಷಕ್ಕಿಂತ ಅಧಿಕ ಅನುದಾನ ನೀಡಲು ಚಿಂತನೆ

ಸದಸ್ಯರಾದ ಮಧು ಜಿ ಮಾದೇಗೌಡ ಅವರು ನೀರು ಬಳಕೆದಾರರ ಸಂಘಗಳ ನಿಷ್ಕ್ರಿಯತೆ ಹಾಗೂ ಅನುದಾನದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, “ನೀರು ಬಳಕೆದಾರರ ಸಂಘಗಳಿಗೆ ಮರು ಚೈತನ್ಯ ನೀಡಲು ಎಲ್ಲಾ ರೈತರು ಮುಂದಾಗಬೇಕು. ಈ ಸಂಘಗಳಿಗೆ ರೂ. 2 ಲಕ್ಷಕ್ಕಿಂತ ಹೆಚ್ಚು ಅನುದಾನವನ್ನು ನೀಡಬೇಕು ಎಂದು ಯೋಚನೆ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

“ಕಾಡಾ ಮುಖಾಂತರ ಇದನ್ನು ಮುನ್ನಡೆಸಬೇಕು. ಬಜೆಟ್ ಅಲ್ಲಿಯೂ ಹಣ ಮೀಸಲು ಇಡಬೇಕು ಎಂದು ಚಿಂತನೆ ನಡೆಸಿದ್ದೇವೆ. ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಬೇಕು ಎನ್ನುವುದು ಎಲ್ಲರ ಆಸೆ. ಆದರೆ ಇದು ಕಾರಣಾಂತರಗಳಿಂದ ಸಾಧ್ಯವಾಗುತ್ತಿಲ್ಲ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments