ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗುತ್ತಿಗೆದಾರ ಪಿ ಎಸ್ ಗೌಡರ್ ಕೆಆರ್ಐಡಿಎಲ್ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (KRIDL)ನಿಂದ 2023-24ನೇ ಸಾಲಿನ ಬಾಕಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಮನನೊಂದ ಸಂತೇಬೆನ್ನೂರಿನ ಗುತ್ತಿಗೆದಾರ ಪಿ ಎಸ್ ಗೌಡರ್ (48) ಡೆತ್ನೋಟ್ ಬರೆದಿಟ್ಟು ಮೇ 26ರಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುತ್ತಿಗೆದಾರ ಪಿ ಎಸ್ ಗೌಡರ್ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ವಾಸಿಸುತ್ತಿದ್ದರು. ಸಂತೇಬೆನ್ನೂರಿನ ಕೃಷಿ ಇಲಾಖೆ ಆವರಣದಲ್ಲಿ 2023-24ರಲ್ಲಿ ನಡೆದ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆ ಮಾಡದೆ ಕೆಆರ್ಡಿಎಲ್ ಅಧಿಕಾರಿಗಳು ಸತಾಯಿಸುತ್ತಿದ್ದರು ಎಂದು ಡೆತ್ನೋಟ್ನಲ್ಲಿ ಆರೋಪಿಸಿದ್ದಾರೆ.
ಕೌಟುಂಬಿಕ ಕಾರಣವೂ ಇತ್ತು
ಗೌಡರ್ ಆತ್ಮಹತ್ಯೆಗೆ ಕೌಟುಂಬಿಕ ಕಾರಣವೂ ಒಂದು ಎಂಬ ಅಂಶ ಡೆತ್ ನೋಟ್ನಲ್ಲಿದೆ. ಗುತ್ತಿಗೆದಾರ ಪಿ.ಎಸ್. ಗೌಡರ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಲಿಂಗಪ್ಪ ಅವರ ಪುತ್ರ. ಆಸ್ತಿ ಹಂಚಿಕೆ ವಿಚಾರದಲ್ಲಿ ಸಹೋದರರ ನಡುವೆ ಮನಸ್ತಾಪವಿತ್ತು. ಒಮ್ಮೆ ದೈಹಿಕ ಹಲ್ಲೆಯೂ ನಡೆದಿತ್ತು, ನಂತರ ರಾಜಿ ಮಾಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗೌಡರ್ ಅಣ್ಣ ಜಿ.ಎಸ್. ನಾಗರಾಜ್, ತಮ್ಮ ಗೌಡರ ಶ್ರೀನಿವಾಸ್ ಅವರೊಂದಿಗೆ ಆಸ್ತಿ ಹಂಚಿಕೆ ವಿಚಾರವಾಗಿ ಮನಸ್ತಾಪವಿತ್ತು. ಹಲವು ಬಾರಿ ಪಂಚಾಯಿತಿ ಮಾಡಲಾಗಿತ್ತು. ಗೌಡರ ಶ್ರೀನಿವಾಸ್ ಅವರ ಪತ್ನಿ ಇಂದುಮತಿ ಮತ್ತು ಅವರ ತಂದೆ ಚಿತ್ರಶೇಖರಪ್ಪ ಅವರು ನಮಗೆ ಮಾನಸಿಕ ಹಿಂಸೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಕೆಆರ್ಐಡಿಎಲ್ ಅಡಿಯಲ್ಲಿ ಒಂದು ಕಾಮಗಾರಿ ನಿರ್ವಹಿಸಿದ್ದು (ಕೃಷಿ ಇಲಾಖೆ ಆವರಣ, ಸಂತೇಬೆನ್ನೂರು) ಇದು 2023-24ನೇ ಸಾಲಿನಲ್ಲಿ ಪೂರ್ಣಗೊಂಡಿದೆ. ಆದರೆ ಇದುವರೆಗೂ ನನಗೆ ಕಾಮಗಾರಿ ಮೊತ್ತವನ್ನು ನೀಡದೆ ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ. ಹಾಗೂ ಈ ಸಂಸ್ಥೆಯಿಂದ ನನ್ನ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ಒದಗಿಸಿಕೊಡಬೇಕು ಎಂದು ಡೆತ್ನೋಟ್ನಲ್ಲಿ ಕೋರಿರುವುದಾಗಿ ತಿಳಿದು ಬಂದಿದೆ.
ಡೆತ್ ನೋಟ್ ಆಧರಿಸಿ ಎಸ್ ಗೌಡರ್ ಪತ್ನಿ ವಸಂತಕುಮಾರಿ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಆರ್ಐಡಿಎಲ್ ಸಂಸ್ಥೆ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಧಿಕಾರಿಗಳಿಗೆ ಸಾವಿನ ಭಾಗ್ಯ: ವಿಜಯೇಂದ್ರ ಟೀಕೆ
“ಕಾಂಗ್ರೆಸ್ ಸರ್ಕಾರದ ಭ್ರಷ್ಟ ವ್ಯೂಹಕ್ಕೆ ಸಿಲುಕಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯ ಕರಿನೆರಳು ಅಚ್ಚೊತ್ತಿರುವ ಬೆನ್ನಲೇ KRDL ನಿಂದ ಬಿಲ್ ಪಾವತಿಯಾಗದೇ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಗುತ್ತಿಗೆದಾರ ಪಿ.ಎಸ್.ಗೌಡರ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ, ಈ ಸರ್ಕಾರದಲ್ಲಿ ಏನಾಗುತ್ತಿದೆ ಎಂಬ ಆತಂಕ ಜನರಲ್ಲಿ ಮೂಡುತ್ತಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ಭಾಗ್ಯಗಳ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಆಡಳಿತದಲ್ಲಿ ಅಮಾಯಕ ಹೆಣ್ಣುಮಕ್ಕಳಿಗೆ- ಕೊಲೆ ಭಾಗ್ಯ, ಪ್ರಮಾಣಿಕ ಅಧಿಕಾರಿಗಳಿಗೆ- ವರ್ಗಾವಣೆ ಭಾಗ್ಯ, ಅಸಹಾಯಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ -ಆತ್ಮಹತ್ಯೆ ಭಾಗ್ಯ ಕರುಣಿಸಲಾಗುತ್ತಿದೆ. ಬರಿದಾಗಿರುವ ಸರ್ಕಾರಿ ಖಜಾನೆ ಗುತ್ತಿಗೆದಾರರ ಪಾಲಿಗೆ ಆತ್ಮಹತ್ಯೆಯ ಬಾವಿಯಾಗುತ್ತಿದೆ. ಈ ಸರ್ಕಾರಕ್ಕೆ ಮಾನವ ಜೀವಗಳೆಂದರೆ ಅದು ಕೇವಲದ ಸಂಕೇತವಾಗಿದೆ” ಎಂದು ಆರೋಪಿಸಿದ್ದಾರೆ.
“ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಷ್ಟೂ ಕಾಲ ರಾಜ್ಯದ ಜನತೆ ‘ನಿತ್ಯ ದುರಂತ
ಸುದ್ದಿ’ ಯನ್ನಷ್ಟೇ ತಿಳಿಯ ಬೇಕಿದೆ, ಇದು ಕರ್ನಾಟಕದ ಪರಮ ದೌರ್ಭಾಗ್ಯವಲ್ಲದೇ ಇನ್ನೇನೂ ಅಲ್ಲ. ಎರಡು ಅಮೂಲ್ಯ ಜೀವಗಳ ಆತ್ಮಹತ್ಯೆಯ ಹಿನ್ನಲೆಯಲ್ಲಿ ಸತ್ಯ ಏನೆಂಬುದು ಬಹಿರಂಗವಾಗಲೇ ಬೇಕಿದೆ, ಇದಕ್ಕೆ CBI ತನಿಖೆಯೊಂದೇ ಉಳಿದಿರುವ ಮಾರ್ಗವಾಗಿದೆ” ಎಂದಿದ್ದಾರೆ.