ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮ ಬಯಲಾಗಿದ್ದು, ಉದ್ಯೋಗದಾತ ಸಂಸ್ಥೆಯ ಹುಳುಕು ಸರಿಪಡಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ 10 ಅಭ್ಯರ್ಥಿಗಳು ಒಎಂಆರ್ ಶೀಟ್ ತಿದ್ದಿ ಹುದ್ದೆಗೆ ಆಯ್ಕೆಯಾಗಿರುವ ಬಗ್ಗೆ ವಿಚಾರಣಾ ಸಮಿತಿ ವರದಿ ನೀದ್ದು, ಇದನ್ನು ಉಲ್ಲೇಖಿಸಿ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
“ದೇಶಾದ್ಯಂತ ತನ್ನ ಯಡವಟ್ಟುಗಳಿಂದಲೇ ಚರ್ಚೆಯಲ್ಲಿರುವ ಕೆಪಿಎಸ್‌ಸಿಯ ಅಕ್ರಮಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಂಡು ಬಯಲಾಗುತ್ತಿವೆ. ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳಿಗೆ ಪ್ರತಿಯೊಂದು ಪರೀಕ್ಷೆಗಳಲ್ಲೂ ಗೊಂದಲಗಳನ್ನು ಸೃಷ್ಟಿಸಿ ಅಕ್ರಮಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಮುನ್ನವೂ ಗೊಂದಲ ಸೃಷ್ಟಿಸಿ, ಪರೀಕ್ಷೆಯ ನಂತರವೂ ಸಂಕಟ ತಂದೊಡ್ಡಿತ್ತು” ಎಂದು ಕಿಡಿಕಾರಿದ್ದಾರೆ.
“ಕರ್ನಾಟಕದ ಆಡಳಿತದಲ್ಲಿ ದಕ್ಷತೆ ತುಂಬಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಆಯ್ಕೆ ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆಗೆ ಅಕ್ರಮಗಳ ಸುರುಳಿ ಸುತ್ತಿಕೊಂಡಿರುವಾಗ ಉದ್ಯೋಗಾಕಾಂಕ್ಷಿತ ರಾಜ್ಯದ ಅಭ್ಯರ್ಥಿಗಳಿಗೆ ನ್ಯಾಯ ಸಿಗುವುದಾದರೂ ಹೇಗೆ” ಎಂದು ಪ್ರಶ್ನಿಸಿದ್ದಾರೆ.
“ರಾಜ್ಯದಲ್ಲಿರುವ ದಪ್ಪಚರ್ಮದ ಹಾಗೂ ಭ್ರಷ್ಟಾಚಾರದ ಕಪ್ಪುಮಸಿ ಅಂಟಿಸಿಕೊಂಡಿರುವ ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮವೆಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಲಕ್ಷಾಂತರ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಯುತ ಮಾರ್ಗದೆಡೆಗೆ ಹೆಜ್ಜೆ ಹಾಕಲಿ” ಎಂದು ಆಗ್ರಹಿಸಿದ್ದಾರೆ.