Homeಕರ್ನಾಟಕಕೆಪಿಎಸ್‌ಸಿ ಪರೀಕ್ಷೆ ಕನ್ನಡದಲ್ಲೇ ಇನ್ಮುಂದೆ ನಡೆಯಲಿ: ಕರವೇ ನಾರಾಯಣಗೌಡ ಆಗ್ರಹ

ಕೆಪಿಎಸ್‌ಸಿ ಪರೀಕ್ಷೆ ಕನ್ನಡದಲ್ಲೇ ಇನ್ಮುಂದೆ ನಡೆಯಲಿ: ಕರವೇ ನಾರಾಯಣಗೌಡ ಆಗ್ರಹ

ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವಾಗ ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿಯೇ ನಡೆಸಬೇಕು ಎಂಬುದು ನನ್ನ ಆಗ್ರಹವಾಗಿದೆ. ಕೆಪಿಎಸ್‌ಸಿ ಪರೀಕ್ಷೆ ಬರೆದು ವಿವಿಧ ಹುದ್ದೆಗಳಿಗೆ ನೇಮಕವಾಗುವವರು ಕನ್ನಡದಲ್ಲಿಯೇ ಆಡಳಿತ ನಡೆಸಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.

ಭ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ಕೆಪಿಎಸ್‌ಸಿ ಸುಧಾರಣೆಗೆ ರಾಜ್ಯ ಸರ್ಕಾರ ಕೆಪಿಎಸ್‌ಸಿ ಕಾಯ್ದೆಗೆ ತಿದ್ದುಪಡಿ ತರಲು ಯತ್ನಿಸುತ್ತಿದೆ ಎಂಬ ಮಾಹಿತಿ ಇದೆ. ಇದು ಕೂಡಲೇ ಆಗಬೇಕಾಗಿರುವ ಕೆಲಸ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರತಿ ಬಾರಿಯೂ ಕೆಪಿಎಸ್‌ಸಿ ಪರೀಕ್ಷೆ ನಡೆದಾಗಲೂ ಒಂದಲ್ಲ ಒಂದು ಅವಾಂತರಗಳು ನಡೆಯುತ್ತದೆ. ಕೆಪಿಎಸ್‌ಸಿ ಅಧಿಕಾರಿಗಳ ಅಪ್ರಾಮಾಣಿಕತೆ, ಭ್ರಷ್ಟತೆ, ಅದಕ್ಷತೆ, ಹೊಣೆಹೇಡಿತನ, ಕನ್ನಡ ದ್ರೋಹ, ವೃತ್ತಿಪರವಲ್ಲದ ನಡವಳಿಕೆ, ಕ್ರಿಯೆಗಳಿಂದ ಕೆಪಿಎಸ್‌ಸಿ ಸರ್ವನಾಶವಾಗುವ ಹಂತ ತಲುಪಿದೆ. ಇದನ್ನು ಈಗ ರಿಪೇರಿ ಮಾಡದೇ ಇದ್ದರೆ ಶಾಶ್ವತವಾಗಿ ಮುಚ್ಚಿಬಿಡುವುದೇ ವಾಸಿ ಎಂದು ಒತ್ತಾಯಿಸಿದ್ದಾರೆ.

ಯಾಕೆಂದರೆ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡ ಭಾಷೆಯಲ್ಲಿ ಹಿಡಿತವಿರುವ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳೇ ರಾಜ್ಯ ಸರ್ಕಾರದ ಉದ್ಯೋಗ ಮಾಡಲು ಹೆಚ್ಚು ಸಮರ್ಥರು. ಹೀಗಾಗಿ ಎಲ್ಲ ಪರೀಕ್ಷೆಗಳೂ ಕನ್ನಡ ಮಾಧ್ಯಮದಲ್ಲೇ ನಡೆಯಲಿ. ಅವರು ಆಯ್ಕೆ ಆದ ನಂತರ ಯಾರಿಗಾದರೂ ಇಂಗ್ಲಿಷ್ ತಿಳಿವಳಿಕೆ ಅಗತ್ಯವಿದ್ದಲ್ಲಿ ಅಂತವರಿಗೆ ಬೇಕಾದರೆ ಆಡಳಿತಾತ್ಮಕ ಇಂಗ್ಲಿಷ್ ಭಾಷೆಯ ತರಬೇತಿ ನೀಡಿದರೆ ಸಾಕಾಗುತ್ತದೆ. ಹೀಗೆ ಮಾಡುವುದರಿಂದ ಎಲ್ಲೋ ಕೆಲವರ ಕಾರಣದಿಂದ ಲಕ್ಷಾಂತರ ಕನ್ನಡದ ಮಕ್ಕಳ ಕತ್ತು ಹಿಚುಕುವ ಕೆಲಸ ತಪ್ಪುತ್ತದೆ ಎಂದಿದ್ದಾರೆ.

ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಸೇರಿದಂತೆ ಇತರೆ ಪರೀಕ್ಷೆಗಳನ್ನು ಇಂಗ್ಲಿಷ್ ನಲ್ಲಿ ಬರೆಯುವ ವಿಪುಲ ಅವಕಾಶಗಳಿವೆ. ಇಂಥ ಆಡಳಿತ ಸೇವೆಗಳು ಮಾತ್ರವಲ್ಲದೆ ಇತರೆ ಖಾಸಗಿ ಉದ್ಯೋಗಗಳನ್ನು ನಿರ್ವಹಿಸಲೂ ಅವರಿಗೆ ಹೆಚ್ಚಿನ ಅವಕಾಶವಿದೆ. ಆದರೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಆಡಳಿತ ಸೇವೆ ಬಿಟ್ಟರೆ ಇತರೆ ಅವಕಾಶಗಳು ಕಡಿಮೆ. ಯುಪಿಎಸ್‌ಸಿ ಪರೀಕ್ಷೆಯಲ್ಲೂ ಕನ್ನಡ ಮಾಧ್ಯಮದವರು ಯಶಸ್ವಿಯಾಗುವುದು ಕಡಿಮೆ. ಯುಪಿಎಸ್‌ಸಿ ನಡೆಸುವ ಪೂರ್ವಭಾವಿ ಪರೀಕ್ಷೆಗಳನ್ನು ಹಿಂದಿ ಅಥವಾ ಇಂಗ್ಲಿಷ್ ನಲ್ಲಿಯೇ ಬರೆಯಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಷ್ಟಪಟ್ಟು ಇಂಗ್ಲಿಷ್ ಕಲಿತು ದಶಕಗಳಿಂದ ಬರೆಯುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳು ಆಡಳಿತ ಸೇವೆಯ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲು ಬಯಸಿದರೆ ತಪ್ಪೇನಿಲ್ಲ. ಆದರೆ ಪರೀಕ್ಷೆಗಳು ಕನ್ನಡದಲ್ಲೇ ನಡೆಯಲಿದೆ ಎಂಬುದು ನನ್ನ ಅಭಿಮತವಾಗಿದೆ ಎಂದು ಹೇಳಿದ್ದಾರೆ.

ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಐದಾರು ತಿಂಗಳುಗಳಿಂದ ಆ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಬಡಿದಾಡುತ್ತಿದ್ದೇನೆ. ಈ ಹೋರಾಟಕ್ಕೆ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದವರೂ ಕೈಜೋಡಿಸಿದ್ದಾರೆ. ಅವರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರೂ ಕನ್ನಡದ ಮಕ್ಕಳೇ. ಹೀಗಾಗಿ ಅವರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವುದೇನು ಸಮಸ್ಯೆ ಅಲ್ಲ. ಹೀಗಾಗಿ ಕೆಪಿಎಸ್‌ಸಿ ಇನ್ನು ಮುಂದೆ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments