ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಸಂಸದ ಸಂಗಣ್ಣ ಕರಡಿ ಅವರ ಮುನಿಸು ಮರೆತು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟರ್ ಪರ ಪ್ರಚಾರಕ್ಕೆ ಸಿದ್ಧರಾಗಿದ್ದಾರೆ.
ಸೋಮವಾರ ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾನು ಬಿಜೆಪಿ ತೊರೆಯುವುದಿಲ್ಲ. ಪಕ್ಷದ ಜೊತೆಯಲ್ಲಿಯೇ ಇದ್ದು, ಮೋದಿ ಗೆಲ್ಲಿಸುತ್ತೇವೆ” ಎಂದರು.
“ಇಂದಿನಿಂದ ಪಕ್ಷದ ಪರ ಪ್ರಚಾರ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನಾವೆಲ್ಲಾ ಶ್ರಮಿಸಬೇಕಿದೆ. ಈಗಿನ ಪರಿಸ್ಥಿತಿಯಲ್ಲಿ ಟಿಕೆಟ್ ಬದಲಾವಣೆ ಕಷ್ಟ ಎನ್ನುವುದು ನನಗೂ ಗೊತ್ತು” ಎಂದು ಹೇಳಿದರು.
“ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಮರು ಪರಿಶೀಲನೆಯಾಗಬೇಕು ಅಥವಾ ನನ್ನನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಪರಿಗಣಿಸಬೇಕು ಎನ್ನುವುದು ಕಾರ್ಯಕರ್ತರ ಬೇಡಿಕೆ. ಈ ಬಗ್ಗೆ ವರಿಷ್ಠರ ಜೊತೆ ಮತ್ತೊಮ್ಮೆ ಮಾತನಾಡುವುದಾಗಿ ರಾಜ್ಯ ನಾಯಕರು ಹೇಳಿದ್ದಾರೆ. ನಾಳೆ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು, ಅವರೊಂದಿಗೆ ರಾಜ್ಯ ನಾಯಕರು ನನ್ನ ವಿಚಾರ ಚರ್ಚಿಸುವ ವಿಶ್ವಾಸವಿದೆ” ಎಂದು ತಿಳಿಸಿದರು.
“ಸೋಮವಾರ ಸಂಜೆಯಿಂದ ಕುಷ್ಟಗಿಯಲ್ಲಿ ನಮ್ಮ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಆರಂಭಿಸುತ್ತೇನೆ. ಪಕ್ಷಕ್ಕೆ ಬೆಂಬಲಿಸುವಂತೆ ನಮ್ಮ ಬೆಂಬಲಿಗರಿಗೆ ಮನವಿ ಮಾಡುತ್ತೇನೆ. ನರೇಂದ್ರ ಮೋದಿ ಅವರನ್ನು ನೋಡಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತೇನೆ” ಎಂದರು.
ಕಾಂಗ್ರೆಸ್ ಸೇರಲ್ಲ
“ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಹಲವು ಸುತ್ತಿನ ಸಂಧಾನ ಸಭೆಗಳು ನಡೆದಿವೆ. ರಾಜಕೀಯದಲ್ಲಿ ಮಾತು ಕಥೆ ನಡೆಯುತ್ತಲೇ ಇರುತ್ತವೆ. ಎಲ್ಲವೂ ಯಶಸ್ವಿಯಾಗುವುದಿಲ್ಲ. ಆದರೂ ಒಂದೇ ಕಡೆ ಇರಬೇಕಾಗುತ್ತದೆ. ಕಾಂಗ್ರೆಸ್ ಸೇರುವ ವಿಚಾರ ಇಲ್ಲ” ಎಂದು ಸ್ಪಷ್ಟಪಡಿಸಿದರು.


