ಡ್ರೈ ಫ್ರೂಟ್ಸ್ ಕೊರಿಯರ್ ಪಾರ್ಸೆಲ್ ಒಂದನ್ನು ನೀಡುವ ವಿಚಾರದಲ್ಲಿ ಆದ ಗಲಾಟೆ ಅತಿರೇಕಕ್ಕೆ ತಿರುಗಿ ಕೊರೆಯರ್ ಪಾರ್ಸೆಲ್ ನೀಡುವ ವ್ಯಕ್ತಿಯಿಂದಲೇ ಇಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಕೋಲಾರ ಗ್ರಾಮಾಂತರ ಪೋಲೀಸು ಠಾಣೆ ವ್ಯಾಪ್ತಿಯ ಮುದುವಾಡಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಮುದುವಾಡಿ ಹೊಸಹಳ್ಳಿ ಗ್ರಾಮದ ಚೇತನ್ ಎಂಬಾತ ಕೊರಿಯರ್ ನಲ್ಲಿ ಡ್ರೈ ಫ್ರೂಟ್ಸ್ ಪಾರ್ಸೆಲ್ ಆರ್ಡರ್ ಮಾಡಿದ್ದನ್ನಲಾಗಿದ್ದು ಡ್ರೈ ಫ್ರೂಟ್ಸ್ ಪಾರ್ಸೆಲ್ ನ ಸಂದೇಶವು ಭಾನುವಾರ ಬಂದಿತ್ತು. ಸಂದೇಶ ಬಂದ ನಂತರ ಕೊರಿಯರ್ ಬಾಯ್ ಗೆ ಮೊಬೈಲ್ ಮೂಲಕ ಮಾತನಾಡುತ್ತಾ ಪಾರ್ಸೆಲ್ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಮಾತಿನ ಸಮರವು ಅತಿರೇಕಕ್ಕೆ ಹೋಗಿ ಕೊರೆಯರ್ ಪಾರ್ಸೆಲ್ ನೀಡುವ ಕೋಲಾರ ನಗರದ ಕೀಲುಕೋಟೆ ನಿವಾಸಿ ಪವನ್ ಎಂಬ ವ್ಯಕ್ತಿ ಹಾಗೂ ಆತನ ಸಹೋದರ ಮೋಹನ್ ಎಂಬಾತ ಮುದುವಾಡಿ ಹೊಸಹಳ್ಳಿ ಗ್ರಾಮಕ್ಕೆ ತೆರಳಿದ್ದಾರೆ.
ನಂತರ ಪಾರ್ಸೆಲ್ ಆರ್ಡರ್ ಮಾಡಿದ್ದ ಚೇತನ್ ಹಾಗೂ ಆತನ ಜೊತೆ ಗೆಳೆಯ ಯುವರಾಜ್ ಬಂದಿದ್ದು ಅಲ್ಲಿ ಮಾತಿಗೆ ಮಾತು ಬೆಳೆದಾಗ ಕೊರಿಯರ್ ಬಾಯ್ ಪವನ್ ಮತ್ತವರ ಸಹೋದರ ಮೋಹನ್ ಆರ್ಡರ್ ಪಾರ್ಸೆಲ್ ಪಡೆಯಲು ಬಂದಿದ್ದ ಚೇತನ್ ಹಾಗೂ ಯುವರಾಜ್ ಗೆಚಾಕುವಿನಿಂದ ಇರಿದಿದ್ದಾರೆ.
ಅವರಿಬ್ಬರಿಗೆ ಇರಿದಿದ್ದೇ ತಡ ಗ್ರಾಮಸ್ಥರೆಲ್ಲರೂ ಸೇರಿ ಕೊರಿಯರ್ ವಿತರಕ ಹಾಗೂ ಆತನ ಸಹೋದರನಿಗೆ ಬಟ್ಟೆ ಕಳಚಿ ಕಂಬಕ್ಕೆ ಕಟ್ಟಿ ಹಾಕಿ ತಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಗೆ ನಡೆಸುತ್ತಿದ್ದಾರೆ.