ಕಲ್ಲು ಕ್ರಷರ್ನಲ್ಲಿ ಕೆಲಸ ಮಾಡುವ ವೇಳೆ ಕಲ್ಲು ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕುನ ಟೇಕಲ್ ಸಮೀಪ ಮಾಕಾರಹಳ್ಳಿ ಬಳಿ ಕಲ್ಲು ಕ್ವಾರಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಬಂಡೆಯೊಂದರ ಬ್ಲಾಸ್ಟಿಂಗ್ ತಯಾರಿಯ ವೇಳೆ ಕಲ್ಲುಗಳು ಹಾಗೂ ಬಂಡೆಯೊಂದು ಉರುಳಿ ಬಿದ್ದು ಸ್ದಳದಲ್ಲಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಸ್ಥಳದಲ್ಲಿದ್ದ ಎರಡು ಟ್ರಾಕ್ಟರ್ಗಳು ಜಖಂಗೊಂಡಿವೆ.
ಮೃತ ದುರ್ದೈವಿ ಆಂಧ್ರ ಮೂಲದ ವೆಂಕಟೇಶ್ ಎನ್ನಲಾಗಿದ್ದು ಆತನೊಂದಿಗಿದ್ದ ಮಧ್ಯಪ್ರದೇಶದ ಹರೀಶ್ ಹಾಗೂ ತಮಿಳು ನಾಡಿನ ಈಶ್ವರ್ ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪ್ರಕರಣವನ್ನು ವಿವರಿಸಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


