ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಸಚಿವ ಕೆ ಎಚ್ ಮುನಿಯಪ್ಪ ಮತ್ತು ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಬಣದ ಬಡಿದಾಟ ತಾರಕಕ್ಕೇರಿದೆ.
ಕೋಲಾರ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಆಹಾರ ಸಚಿವ ಮುನಿಯಪ್ಪ ಪಟ್ಟು ಹಿಡಿದಿದ್ದು, ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಇತ್ತ ರಮೇಶ್ ಕುಮಾರ್ ಬಣ ಕೂಡ ತಮ್ಮ ಅಭ್ಯರ್ಥಿಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿದ್ದು, ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೆ ಯಾವುದೇ ಕಾರಣಕ್ಕೂ ಕೆಲಸವೇ ಮಾಡುವುದಿಲ್ಲ ಎಂಬ ಎಚ್ಚರಿಕೆ ಸಂದೇಶ ಸಾರಿದ್ದಾರೆ. ಮುಂದುವರಿದು ರಮೇಶ್ ಕುಮಾರ್ ಬಣದ ಶಾಸಕರು ರಾಜೀನಾಮೆ ನೀಡುವ ಮಾತುಗಳನ್ನು ಕೂಡ ಆಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದರೂ, ನಾಯಕರ ನಡುವಿನ ಭಿನ್ನಮತ ಶಮನವಾಗಿಲ್ಲ. ಸಚಿವ .ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೇ ಜಿಲ್ಲೆಯ ಐವರು ಶಾಸಕರು ರಾಜಿನಾಮೆ ನೀಡುತ್ತೇವೆ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಬೆದರಿಕೆ ಹಾಕಿದ್ದಾರೆ.
ಮಾದಿಗ ಸಮುದಾಯಕ್ಕೆ ಸೇರಿದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್ ಹನುಮಂತಯ್ಯ ಅವರನ್ನು ಕಣಕ್ಕೆ ಇಳಿಸಬೇಕು ಎಂದು ರಮೇಶ್ ಕುಮಾರ್ ಬಣದವರು ಒತ್ತಡ ಹೇರಿದ್ದು, ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ತಮ್ಮದು ಎಂದು ಕೇಂದ್ರ ನಾಯಕರಿಗೆ ಭರವಸೆ ನೀಡಿದ್ದಾರೆ.
ಐವರು ಶಾಸಕರು ರಾಜೀನಾಮೆ!
ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಮುನಿಯಪ್ಪ ಕುಟುಂಬ ಟಿಕೆಟ್ ನೀಡದಂತೆ ಮನವಿ ಮಾಡಿದ್ದೇವೆ. ಒಂದು ವೇಳೆ ಟಿಕೆಟ್ ನೀಡಿದರೇ ಮಾಲೂರು ಶಾಸಕ ನಂಜೇಗೌಡ, ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್, ನಜೀರ್ ಅಹ್ಮದ್ ರಾಜೀನಾಮೆ ನೀಡುತ್ತೇವೆ” ಎಂದರು.
ಮುನಿಯಪ್ಪ ಹೇಳುವುದೇನು?
ಸಚಿವ ಕೆ ಎಚ್ ಮುನಿಯಪ್ಪ ಸುದ್ದಿಗಾರರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿ, “ಇಂದು ಸಂಜೆ ಟಿಕೆಟ್ ಘೋಷಣೆ ಆಗಬಹುದು. ನಾನು ಕೋಲಾರದಲ್ಲಿ ಏಳು ಬಾರಿ ಗೆದ್ದಿದ್ದೇನೆ, ಅನುಭವ ಇದೆ. ಎಲ್ಲರಿಗೂ ಮನವಿ ಮಾಡಿದ್ದೇನೆ ಅವಕಾಶ ಮಾಡಿಕೊಡಿ ಅಂತ. ಟಿಕೆಟ್ ಸಿಗುವ ಆಶಾ ಭಾವನೆ ಇದೆ” ಎಂದರು.
ಕೆಲವು ಶಾಸಕರ ರಾಜೀನಾಮೆ ನೀಡುತ್ತೇವೆ ಎಂಬ ಬೆದರಿಕೆಯ ಕುರಿತು ಪ್ರತಿಕ್ರಿಯಿಸಿ, “ಅಭ್ಯರ್ಥಿ ಯಾರಾಗಬೇಕು ಎಂಬುದು ರಮೇಶ್ ಕುಮಾರ್ ಹಾಗೂ ಸಚಿವರ ಉಪಸ್ಥಿತಿಯಲ್ಲೇ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ. ರಮೇಶ್ ಕುಮಾರ್, ಮಾಲೂರು ನಂಜೇಗೌಡ ಎಲ್ಲರಿಗೂ ಮನವಿ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೇಟ್ ಕೊಟ್ಟರೂ ಗೆಲ್ಲಿಸುತ್ತೇವೆ ಎಂದಿದ್ದೇವೆ. ಇದಕ್ಕೆ ಮುಂದಾಳತ್ವ ರಮೇಶ್ ಕುಮಾರ್ ಅವರದೇ” ಎಂದು ತಿಳಿಸಿದರು.