ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಕೇಂದ್ರ ಬಿಜೆಪಿ ಸರ್ಕಾರ, ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “1800 ಕೋಟಿ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ಪ್ರಜಾಪ್ರಭುತ್ವ ದೇಶ. ಆದರೂ ಬಿಜೆಪಿ ಸರ್ಕಾರ ಅಧಿಕಾರಿಗಳ ಮೂಲಕ ವಿರೋಧ ಪಕ್ಷಗಳಿಗೆ ಕಿರುಕುಳ ನೀಡುತ್ತಿದೆ” ಎಂದು ಆರೋಪಿಸಿದರು.
“ಸೂರ್ಯ ಮುಳುಗುತ್ತಾನೆ, ಮತ್ತೆ ಹುಟ್ಟುತ್ತಾನೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಸರ್ಕಾರ ಬೆದರಿದೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅವರಿಗೆ ಅರಿವಾಗಿದೆ. ಹೀಗಾಗಿ ಅವರು ಎಲ್ಲರಿಗೂ ಕಿರುಕುಳ ನೀಡುತ್ತಿದ್ದಾರೆ” ಎಂದರು.
ನನಗೂ ನೋಟಿಸ್ ಬಂದಿದೆ
“ನನ್ನ ವಿರುದ್ಧದ ಪ್ರಕರಣ ಮುಕ್ತಾಯವಾಗಿದ್ದರೂ ನಿನ್ನೆ ರಾತ್ರಿ ನನಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಹಾಲಿ ಕೇಂದ್ರ ಸಚಿವರು ಸೇರಿದಂತೆ ಅನೇಕ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣಗಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಆ ಪ್ರಕರಣಗಳಲ್ಲಿ ಯಾವುದೇ ವಿಚಾರಣೆ, ನೋಟಿಸ್, ಆರೋಪಪಟ್ಟಿ ಸಲ್ಲಿಕೆ, ಕ್ರಮ ಇಲ್ಲವಾಗಿದೆ. ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಬಿಜೆಪಿ ಸೇರಿದರೆ ಮಾತ್ರ ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಅವರ ವಿರುದ್ಧ ಪ್ರಕರಣ ಮುಚ್ಚಿಹಾಕಲಾಗುತ್ತದೆ” ಎಂದು ತಿಳಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಡಿ.ಕೆ. ಸಹೋದರರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ನಾವು ಬಲಿಷ್ಠವಾದಷ್ಟು ನಮಗೆ ಹೆಚ್ಚು ಶತ್ರಗಳು, ನಾವು ಬಲಿಷ್ಠವಾದಷ್ಟು ನಮಗೆ ಹೆಚ್ಚು ಅಧಿಕಾರ. ನಮಗೆ ಇದು ಹೊಸತಲ್ಲ. ಅಮಿತ್ ಶಾ ಅವರಾದರೂ ಬರಲಿ, ಪ್ರಧಾನಮಂತ್ರಿಗಳಾದರೂ ಬರಲಿ. ನಾವು ರಾಜಕೀಯವಾಗಿ ದೇವೇಗೌಡರು, ಅವರ ಪುತ್ರ ಕುಮಾರಸ್ವಾಮಿ, ಸೊಸೆ ಹಾಗೂ ಮೊಮ್ಮಗನನ್ನು ಎದುರಿಸಿದ್ದೇವೆ. ನಮ್ಮ ಜನಕ್ಕೆ ಪ್ರಜ್ಞೆ ಇದೆ” ಎಂದರು
ಪಕ್ಷದ ಲಕ್ಷ್ಮಣ ರೇಖೆ ಯಾರೂ ದಾಟುವಂತಿಲ್ಲ
ಕೋಲಾರದ ಅಭ್ಯರ್ಥಿ ಘೋಷಣೆಯಾಗಿರುವ ಬಗ್ಗೆ ಕೇಳಿದಾಗ, “ನಾನು ಮುನಿಯಪ್ಪ, ಬೇರೆ ನಾಯಕರ ಜತೆ ಚರ್ಚೆ ಮಾಡಿದ್ದು, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಗುಂಪು ರಾಜಕೀಯಕ್ಕೆ ಅವಕಾಶವಿಲ್ಲ. ಶಿಸ್ತು ಇಲ್ಲಿ ಬಹಳ ಮುಖ್ಯ. ಯಾವುದೇ ಸಚಿವರು, ಶಾಸಕರು ಪಕ್ಷದ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ” ಎಂದು ಹೇಳಿದರು.