Homeಕರ್ನಾಟಕಕೆಕೆಆರ್‌ಡಿಬಿ | ₹25 ಕೋಟಿ ವರ್ಕ್ ಆರ್ಡರ್ ಆಮಿಷ, ಸಚಿವರ ಅಳಿಯ ಸೇರಿ ಐವರ ವಿರುದ್ಧ...

ಕೆಕೆಆರ್‌ಡಿಬಿ | ₹25 ಕೋಟಿ ವರ್ಕ್ ಆರ್ಡರ್ ಆಮಿಷ, ಸಚಿವರ ಅಳಿಯ ಸೇರಿ ಐವರ ವಿರುದ್ಧ ಎಫ್‌ಐಆ‌ರ್

ಕಲಬುರಗಿ ಜಿಲ್ಲೆಯ ಉಪಗುತ್ತಿಗೆದಾರನಿಗೆ ಸರ್ಕಾರದ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವರ್ಕ್ ಆರ್ಡರ್ ಕೊಡಿಸುವುದಾಗಿ ನಂಬಿಸಿ 1.21 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ರಾಜ್ಯ ಸಚಿವರೊಬ್ಬರ ಅಳಿಯ ಸೇರಿ ಐವರ ವಿರುದ್ಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) 20 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ 5 ಕೋಟಿ ರೂ. (ಒಟ್ಟು 25 ಕೋಟಿ ರೂ.) ಟೆಂಡರ್‌ಗಳ ಕಾರ್ಯಾದೇಶ ಕೊಡಿಸುವುದಾಗಿ ನಂಬಿಸಿ ಉಪಗುತ್ತಿಗೆ ದಾರನಿಂದ 1.21 ಕೋಟಿ ರೂ. ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಉಪಗುತ್ತಿಗೆದಾರ ಶರಣಬಸಪ್ಪ ನೀಡಿದ ದೂರಿನ ಅನ್ವಯ ಕಲಬುರಗಿಯ ಲಕ್ಷ್ಮಿಕಾಂತ ಕಟ್ಟಿಮನಿ, ರಾಯಚೂರಿನ ಸಂತೋಷ್ ನಾಯಕ, ಕಿರಣ್, ಬೆಂಗಳೂರಿನ ಶ್ರೀಧರ್ ಹಾಗೂ ಕೊಪ್ಪಳದ ರವಿ ಮಾಲಿಪಾಟೀಲ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ದೂರುದಾರರು ಜಲಜೀವನ್ ಮಿಷನ್ ಕಾಮಗಾರಿಗಳ ಉಪಗುತ್ತಿಗೆಯನ್ನು ಪಡೆದು ಅವುಗಳ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಪರಿಚಯಸ್ಥನಾಗಿದ್ದ ಲಕ್ಷ್ಮಿಕಾಂತ, ತನಗೆ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳ ಪರಿಚಯವಿದೆ. ಅವರ ಸಹಕಾರದಿಂದ ಬಹಳಷ್ಟು ಜನರಿಗೆ 50 ಕೋಟಿ ರೂ.ವರೆಗಿನ ಟೆಂಡರ್‌ಗಳನ್ನು ಕೊಡಿಸಿದ್ದಾಗಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಕೆಆರ್‌ಡಿಬಿಯ 20 ಕೋಟಿ ರೂ. ಹಾಗೂ ಸರ್ಕಾರಿ ಕಚೇರಿಗಳ ಕ್ಯಾಲೆಂಡರ್ ಪೂರೈಕೆಯ 5 ಕೋಟಿ ರೂ. ಟೆಂಡರ್, 25 ಕೋಟಿ ರೂ. ವರ್ಕ್ ಆರ್ಡರ್ ಕೊಡಿಸುವುದಾಗಿ ಉಪಗುತ್ತಿಗೆದಾರನಿಗೆ ಆರೋಪಿಗಳು ನಂಬಿಸಿದ್ದರು. ಆರೋಪಿಗಳ ಬೇಡಿಕೆಯಂತೆ ಕಚೇರಿ ಖರ್ಚಿನ 1.21 ಕೋಟಿ ರೂ.ಗಳನ್ನು ಆರೋಪಿ ಸಂತೋಷ್ ನಾಯಕ ಖಾತೆಗೆ ಜಮಾ ಮಾಡಿದ್ದರು. ಕಟ್ಟಡ ಸಾಮಗ್ರಿಗಳು ಖರೀದಿಸಿದ್ದಾಗಿ ಬಿಲ್ ತೋರಿಸಿ 2.28 ಲಕ್ಷ ರೂ. ಪಡೆದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಹಳ ದಿನಗಳು ಕಳೆದರೂ ಉಪಗುತ್ತಿಗೆದಾರನಿಗೆ ವರ್ಕ್ ಆರ್ಡರ್ ಬರಲಿಲ್ಲ. ಆರೋಪಿಗಳಿಗೆ ಫೋನ್ ಮಾಡಿದಾಗ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ನಿಮಗೆ ಖಂಡಿತವಾಗಿ ಟೆಂಡರ್ ಆರ್ಡರ್ ಕೊಡಿಸುತ್ತೇವೆ ಎಂದಿದ್ದರು. ಟೆಂಡರ್‌ಗಾಗಿ ನೀಡಿದ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದಾಗ 50 ಲಕ್ಷ ರೂ. ಚೆಕ್ ನೀಡಿದ್ದರು. ಹಣ ವರ್ಗಾವಣೆಗೆ ಯತ್ನಿಸಿದಾಗ ಆ ಚೆಕ್ ಬೌನ್ಸ್ ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೂರುದಾರರು, “ರಾಜಕಾರಣಿಗಳ ಹೆಸರು ಹೇಳಿಕೊಂಡು ಪರಿಚಯ ಮಾಡಿಕೊಂಡು ಆರೋಪಿಗಳು, ನನ್ನ ಜಿಎಸ್‌ಟಿ ನಂಬರ್ ಮೇಲೆ ವರ್ಕ್ ಆರ್ಡರ್ ಕೊಡಿಸುವುದಾಗಿ ನಂಬಿಸಿ ನನ್ನಿಂದ ಹಣ ಪಡೆದರು. ಐವರು ಆರೋಪಿಗಳಲ್ಲಿ ಸಚಿವರೊಬ್ಬರ ಅಳಿಯ ಸಹ ಇದ್ದಾರೆ. ಹಣ ವಾಪಸ್ ಕೊಡುವುದಾಗಿ ಆರೋಪಿಗಳು ಭರವಸೆ ಕೊಟ್ಟಿದ್ದರು” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments