ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿದ್ದ ಕೆ ಎಸ್ ಪ್ರತಿಮಾ ಅವರನ್ನು ಕೊಂದು ಪರಾರಿಯಾಗಿದ್ದ ಆರೋಪಿ ಕಿರಣ್‌ನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕಿರಣ್‌ನನ್ನು ನವೆಂಬರ್ 15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಜಂಬೂ ಸವಾರಿ ದಿಣ್ಣೆಯ ನಿವಾಸಿಯಾಗಿರುವ ಕಿರಣ್, ಪ್ರತಿಮಾ ಬಳಿ ಗುತ್ತಿಗೆ ಆಧಾರದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸದಿಂದ ಕಿರಣ್‌ನನ್ನು ತೆಗೆಯಲಾಗಿತ್ತು. ಕೆಲಸಕ್ಕೆ ವಾಪಸು ತೆಗೆದುಕೊಳ್ಳುವಂತೆ ಪ್ರತಿಮಾ ಅವರನ್ನು ಸಾಕಷ್ಟು ಸಲ ಬೆನ್ನು ಬಿದ್ದು ಆಗ್ರಹಿಸಿದ್ದ. ಆದರೆ, ಪ್ರತಿಮಾ ಕೆಲಸಕ್ಕೆ ತೆಗೆದುಕೊಂಡಿರಲಿಲ್ಲ. ಅದೇ ಕಾರಣಕ್ಕೆ ಕೋಪಗೊಂಡು ಆರೋಪಿ ಕೃತ್ಯ ಎಸಗಿದ್ದಾನೆಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ನ. 05ರಂದು ಗೋಕುಲ್ ಬಡಾವಣೆಯಲ್ಲಿ ಮನೆಯಲ್ಲಿ ಪ್ರತಿಮಾ ಕೊಲೆಯಾಗಿದೆ ಎಂದು ಸುದ್ದಿ ಬರುತ್ತದೆ. ಸುದ್ದಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಹೋದಾಗ ಪ್ರತಿಮಾ ಅವರ ಕೊಲೆಯಾಗಿತ್ತು. ಕೂಡಲೇ ಮೂರು ತಂಡಗಳನ್ನ ರಚನೆ ಮಾಡಿ ತನಿಖೆ ಮಾಡಲಾಗಿತ್ತು. ಸಂಬಂಧಿಸಿದ ವ್ಯಕ್ತಿಗಳನ್ನ ವಿಚಾರಣೆ ಮಾಡಿದ ವೇಳೆ ಕ್ಲ್ಯೂ ಸಿಕ್ಕಿತ್ತು. ಅವರ ಜೊತೆ ಕೆಲಸ ಮಾಡ್ತಿದ್ದ ವ್ಯಕ್ತಿಯೇ ಕೊಲೆ ಮಾಡಿರೋದಾಗಿ ಬೆಳಕಿಗೆ ಬಂದಿತ್ತು” ಎಂದು ಡಿಸಿಪಿ ರಾಹುಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ
“ಶನಿವಾರ ರಾತ್ರಿ ಕೊಲೆ ಮಾಡಿದ್ದ ಈತ, ಮುಡಿ ಕೊಡಲು ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ನೇಹಿತರ ಜೊತೆ ಹೋಗಿದ್ದ. ಭಾನುವಾರ ಮಧ್ಯಾಹ್ನವೇ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಪೊಲೀಸರು, ಕಿರಣ್‌ನನ್ನು ಬಂಧಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಕೆಲಸದಿಂದ ತೆಗೆದಿದ್ದರಿಂದ ಕೋಪಗೊಂಡು ಕೊಲೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಬೆಂಗಳೂರಿನ 2ನೇ ACMM ಕೋರ್ಟ್‌ಗೆ ಆರೋಪಿಯನ್ನು ಹಾಜರು ಪಡೆಸಿದಾಗ ನ್ಯಾಯಾಧೀಶರ ಮುಂದೆ ಕಿರಣ್ ಕೈ ಮುಗಿದುಕೊಂಡೆ ನಿಂತಿದ್ದ. ನ್ಯಾಯಾಧೀಶರಿಂದ ನಿನ್ನದೇನಾದರೂ ತಾಕರಾರು ಇದೆಯಾ ಎಂದು ಪ್ರಶ್ನೆ ಮಾಡಿದ್ದು, ಈ ವೇಳೆ “ನನ್ನನ್ನು ಜೈಲಿಗೆ ಕಳುಹಿಸಿ” ಎಂದಷ್ಟೇ ಹೇಳಿದ್ದಾನೆ.
ತೀರ್ಥಹಳ್ಳಿಯಲ್ಲಿ ಪ್ರತಿಮಾ ಅಂತ್ಯಕ್ರಿಯೆ
ಪ್ರತಿಮಾ ಮೃತದೇಹವನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಕುಟುಂಬಸ್ಥರು ತೆಗೆದುಕೊಂಡು ಬಂದಿದ್ದು, ಹಿಂದು ರುದ್ರಭೂಮಿಯಲ್ಲಿ ಸೋಮವಾರ ಬೆಳಗ್ಗೆ 9.30 ಕ್ಕೆ ಪ್ರತಿಮಾ ಅಂತ್ಯಕ್ರಿಯೆ ನೆರವೇರಿಸಲಾಗಿದೆ.