Homeಕರ್ನಾಟಕಕಿಯೋನಿಕ್ಸ್ ವೆಂಡರ್ಸ್ ಬಿಲ್ ಬಾಕಿ; ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ತರಾಟೆ

ಕಿಯೋನಿಕ್ಸ್ ವೆಂಡರ್ಸ್ ಬಿಲ್ ಬಾಕಿ; ಪ್ರಿಯಾಂಕ್ ಖರ್ಗೆಗೆ ಕುಮಾರಸ್ವಾಮಿ ತರಾಟೆ

ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಿಯೋನಿಕ್ಸ್ ವೆಂಡರ್ಸ್ ಪತ್ರ ಬರೆದಿರುವ ಪ್ರಕರಣ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತ‌ನ್ನಾಡುವುದು ಬಿಟ್ಟು ಮೊದಲು ಬಾಕಿ ಬಿಲ್‌ಗಳನ್ನು ಚುಕ್ತಾ ಮಾಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆ‌ಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಈ ಸರಕಾರ ಗುತ್ತಿಗೆದಾರರು ಹಾಗೂ ವೆಂಡರ್ಸ್‌ಗಳ ಬಿಲ್ ಪಾವತಿಸಲು ಮೀನಮೇಷ ಎಣಿಸುತ್ತಿದೆ. ಸರಕಾರದ ಆಂತರ್ಯ ಏನೆಂಬುದು ಎಲ್ಲರೂ ಬಲ್ಲ ವಿಷಯ. ತಮಗೆ ಬಿಡುಗಡೆ ಆಗಬೇಕಿರುವ ಬಿಲ್‌ಗಳನ್ನು ಪಾವತಿಸಿ ಎಂದು ಗುತ್ತಿಗೆದಾರರು ಧೈರ್ಯದಿಂದ ಕೇಳಬೇಕು. ಅವರೇನೂ ಭಿಕ್ಷುಕರಲ್ಲ” ಎಂದರು.

“ಸಣ್ಣ ಪ್ರಮಾಣದ ಗುತ್ತಿಗೆದಾರರು ತಮ್ಮ ಮನೆ ಹೆಣ್ಣುಮಕ್ಕಳ ಒಡವೆಗಳನ್ನು ಒತ್ತೆ ಇಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಮಾಡಿರುವ ಸಾಲಗಳನ್ನು ತೀರಿಸಲಾಗದೆ ಬೀದಿಗೆ ಬಂದಿದ್ದಾರೆ. ಎಲ್ಲರ ಮೇಲೆ ಬೇಕಾಬಿಟ್ಟಿ ಮಾತನಾಡುವ ಖರ್ಗೆ ಅವರು ಸಬೂಬು ಹೇಳುವುದು ಬಿಡಬೇಕು. ಈವರೆಗೆ ಗುತ್ತಿಗೆದಾರರ ಎಲ್‌ಓಸಿಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಸರಕಾರಕ್ಕೆ ಸಾಧ್ಯವಾಗಿಲ್ಲ. ಸಚಿವರು ಹಿಂದಿನ ಸರಕಾರದ ಮೇಲೆ ಗೂಬೆ ಕೂರಿಸುವ ಬದಲು ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲಿ” ಎಂದು ಒತ್ತಾಯ ಮಾಡಿದರು.

ಆತ್ಮಹತ್ಯೆಗೆ ಶರಣಾಗಬೇಡಿ ಎಂದು ಮನವಿ

“ಯಾರೇ ಆಗಲಿ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಹಣ ನಿಮಗೆ ಕೊಡಲೇಬೇಕು. ಆತ್ಮಹತ್ಯೆಗೆ ಶರಣಾಗಬೇಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕಿಕೊಳ್ಳುತ್ತೀರಾ? ನೀವು ತಪ್ಪು ಮಾಡಿಲ್ಲ, ತಪ್ಪು ಮಾಡಿರುವುದು ಸರ್ಕಾರ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಧೈರ್ಯ ಮಾಡಿ. ನಿಮಗೆ ಸಿಕ್ಕಿರುವ ಕಾಮಗಾರಿಯನ್ನು ಪ್ರಾಮಾಣಿಕವಾಗಿ ಮಾಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕುತ್ತೀರಿ. ಅಂತಹ ಮನಸ್ಥಿತಿಯಿಂದ ಹೊರಬನ್ನಿ. ಕೆಲಸವನ್ನೇ ಮಾಡದೆ ಬಿಲ್ ತೆಗೆದುಕೊಂಡು ಹಣ ಹೊಡೆದ ಎಷ್ಟೋ ಅಧಿಕಾರಿಗಳು, ದೊಡ್ಡ ದೊಡ್ಡ ಗುತ್ತಿಗೆದಾರರು ಇದ್ದಾರೆ. ಸರಿಯಾದ ಕೆಲಸ ಮಾಡಿದ್ದರೆ ನೀವು ಯಾಕೆ ಹೆದರಬೇಕು” ಎಂದು ಪ್ರಶ್ನಿಸಿದರು.

ಇನ್ನೂ ಸಾಕ್ಷ್ಯ ಬೇಕೆ? ಸಿಎಂಗೆ ಟಾಂಗ್

“60% ಕಮಿಷನ್ ಬಗ್ಗೆ ಮುಖ್ಯಮಂತ್ರಿಗಳು ದಾಖಲೆ ಕೊಡಿ ಎಂದು ನನ್ನನ್ನು ಹೇಳಿದ್ದರು. ಗುತ್ತಿಗೆದಾರರ ಸಂಘದ ಹಂಗಾಮಿ ಅಧ್ಯಕ್ಷರು ಎಷ್ಟೆಷ್ಟು ಪರ್ಸೆಂಟೇಜ್ ಎಂದು ಅವರೇ ಪಟ್ಟಿ ಮಾಡಿ ಹೇಳಿದ್ದಾರೆ. ಇದಕ್ಕಿಂತ ದಾಖಲೆ ಬೇಕಾ ಮುಖ್ಯಮಂತ್ರಿಗಳಿಗೆ? ಎಂದು ಸಿಎಂಗೆ ಟಾಂಗ್ ಕೊಟ್ಟರು.

ತೆರಿಗೆ ಸಂಗ್ರಹದಲ್ಲಿ ಸರಕಾರ ಹಿಂದೆ ಬಿದ್ದಿದೆ

“ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತೀರಿ. ಗ್ಯಾರಂಟಿ ಕೊಟ್ಟಿದ್ದೇವೆ ಎನ್ನುತ್ತೀರಿ. ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎನ್ನುತ್ತೀರಿ. ನಿಮ್ಮ ಯಾವ ಕೆಲಸದಲ್ಲಿಯೂ ದಕ್ಷತೆ ಕಾಣುತ್ತಿಲ್ಲ. ನಿರೀಕ್ಷೆಗೆ ತಕ್ಕಂತೆ ತೆರಿಗೆ ಸಂಗ್ರಹ ಆಗುತ್ತಿಲ್ಲ. ಬಜೆಟ್ ಮಂಡನೆಗೆ ತಯಾರಿ ಮಾಡುತ್ತಿದ್ದೀರಿ, ಆದರೆ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದ್ದೀರಿ. ಎಲ್ಲಾ ಬಾಬ್ತುಗಳಿಂದ ಸುಮಾರು ₹62,424 ಕೋಟಿಯಷ್ಟು ತೆರಿಗೆ ಸಂಗ್ರಹ ಕಡಿಮೆ ಆಗಿದೆ. ಮೇಲಿಂದ ಮೇಲೆ ಸಾಲ ಮಾಡುತ್ತಿದ್ದೀರಿ. ಪೆಟ್ರೋಲ್, ಡೀಸೆಲ್, ಮುದ್ರಾಂಕ, ಮಾರ್ಗದರ್ಶಿ ಶುಲ್ಕ, ವಿದ್ಯುತ್ ದರ, ಬಸ್ ಪ್ರಯಾಣ ದರ, ಮದ್ಯದ ದರ ಸೇರಿದಂತೆ ಎಲ್ಲವನ್ನೂ ಏರಿಕೆ ಮಾಡಿದ್ದೀರಿ. ಇಷ್ಟೆಲ್ಲಾ ಮಾಡಿದರೂ ನಿಮ್ಮ ತೆರಿಗೆ ಸಂಗ್ರಹದಲ್ಲಿ ಕೊರತೆ ಆಗಿದೆ. ನಿಮ್ಮ ಆಡಳಿತ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ” ಎಂದು ವಾಗ್ದಾಳಿ ನಡೆಸಿದರು.

ಸಿಎಂ ಒಕ್ಕಲಿಗ, ಲಿಂಗಾಯತರನ್ನು ಡಿ ಗ್ರೇಡ್ ಮಾಡುತ್ತಿದ್ದಾರೆ!

“ಜಾತಿ ಗಣತಿ ವರದಿ ಇಟ್ಟುಕೊಂಡು ಒಕ್ಕಲಿಗ, ಲಿಂಗಾಯತರನ್ನು ಡಿ ಗ್ರೇಡ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ. ಜಾತಿ ಜನಗಣತಿ ವರದಿಯನ್ನು ಸಂಪುಟದಲ್ಲಿ ಚರ್ಚೆ ಮಾಡುತ್ತಾರಂತೆ. ಇದು ಕೇವಲ ಎರಡು ಸಮುದಾಯಗಳ ಪ್ರಶ್ನೆ ಅಲ್ಲ. ಇಷ್ಟು ದಿನ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ಶೋಷಿತ ಸಮುದಾಯಗಳಿಗೆ ಏನು ಮಾಡಿದ್ದಾರೆ ಏನುವುದನ್ನು ಹೇಳಬೇಕು” ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.

“ಯಾವ ಯಾವ ಜಾತಿಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತ ಎಷ್ಟು ಜನ ಬಡವರು ಇದ್ದಾರೆ ಎಂಬುದನ್ನು ಗಮನಿಸಬೇಕು. ಇಷ್ಟು ದಿನ ಸರ್ಕಾರದ ಸೌಲಭ್ಯಗಳು ಯಾರಿಗೆ ಸಿಕ್ಕಿವೆ, ಯಾರಿಗೆ ಸಿಕ್ಕಿಲ್ಲ ಎಂಬುದರ ಮೇಲೆ ಸರ್ಕಾರ ಬೆಳಕು ಚೆಲ್ಲಬೇಕು” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments