ಮಾಜಿ ಸಂಸದ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬರ ಅಪಹರಣದ ಆರೋಪ ಭವಾನಿ ರೇವಣ್ಣ ಅವರ ಮೇಲಿದೆ.
‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ ಮಂಗಳವಾರ ಆದೇಶ ಪ್ರಕಟಿಸಿತು.
“ಮಹಿಳೆಯರ ರಕ್ಷಣೆ ವಿಚಾರದಲ್ಲಿ ಅವರನ್ನು ಅನಗತ್ಯವಾಗಿ ವಶಕ್ಕೆ ಪಡೆಯುವ ಅಗತ್ಯವಿಲ್ಲ. ಆದಾಗ್ಯೂ ಅವರನ್ನು ತನಿಖೆಗಾಗಿ ಮೈಸೂರು ಮತ್ತು ಹಾಸನ ಹಾಗೂ ಅಗತ್ಯವಿದ್ದ ಕಡೆ ಕರೆದುಕೊಂಡು ಹೋಗಬಹುದಾಗಿದೆ” ಎಂದಿದ್ದಾರೆ.
“ಈಗಾಗಲೇ ಅರ್ಜಿದಾರರು ತನಿಖೆಗೆ ಸಹಕಾರ ನೀಡಿದ್ದಾರೆ. ಅವರಿಗೆ ತನಿಖೆಯ ವೇಳೆ 85 ಪ್ರಶ್ನೆಗಳನ್ನು ಕೇಳಲಾಗಿದೆ. ಅವರು ಎಲ್ಲವಕ್ಕೂ ಉತ್ತರಿಸಿದ್ದಾರೆ. ಪೊಲೀಸರು ಕೇಳಿದ ರೀತಿಯಲ್ಲೇ ಉತ್ತರಿಸಬೇಕು ಎಂದು ಹೇಳಲಾಗುವುದಿಲ್ಲ” ಎಂದು ನ್ಯಾಯಪೀಠ ಹೇಳಿದೆ.
“ಸ್ತ್ರೀಯರು ಈ ರೀತಿಯ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶಗಳಿರುವಾಗ ವಾರ್ತಾ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಸಂಯಮದಿಂದ ಇರಬೇಕಾಗುತ್ತದೆ. ಈಗಲೇ ಅಪರಾಧಿ ಎಂದರೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗಲಿದೆ. ಮಾಧ್ಯಮಗಳ ವಿಚಾರಣೆ ಪರಿಗಣಿಸಲಾಗದು” ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ನ್ಯಾಯಪೀಠ ಉಲ್ಲೇಖಿಸಿದೆ.